ತಿರುವನಂತಪುರ : ವಯನಾಡ್ ಭೂಕುಸಿತಗಳು ಸಂಭವಿಸಿದ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರಿಗಾಗಿ ನಡೆಯುತ್ತಿರುವ ಹುಡುಕಾಟ ಕರುಳು ಹಿಂಡುವಂತಿದೆ.
ತನ್ನದೇ ಸ್ಥಿತಿಯಲ್ಲಿರುವ ಇತರ ಹಲವರೊಂದಿಗೆ ಹತಾಶ ತಂದೆಯೋರ್ವ ತನ್ನ ಮಗಳಿಗಾಗಿ ಹುಡುಕಾಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳನ್ನು ಟಿವಿ ಪರದೆಗಳು ತೋರಿಸಿವೆ.
ಮೃತಪಟ್ಟವರು, ಕೆಸರು ಮತ್ತು ಕಾಂಕ್ರೀಟ್ ಅವಶೇಷಗಳ ಕೆಳಗೆ ಹೂತುಹೋಗಿರುವವರಿಗಾಗಿ ಎಲ್ಲೆಡೆ ಹುಡುಕಾಡುತ್ತಿದ್ದಾರೆ. ಅಸಹನೀಯ ಮೌನದ ನಡುವೆ ರಕ್ಷಿಸಲ್ಪಟ್ಟವರ ಸಂಕಟ ಮತ್ತು ನಿಟ್ಟುಸಿರುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಭೀಕರ ಸರಣಿ ಭೂಕುಸಿತಗಳಿಗೆ ಸಾಕ್ಷಿಯಾದ ಕೇರಳದ ವಯನಾಡಿನಲ್ಲಿ ಮೂರನೇ ದಿನವಾದ ಗುರುವಾರವೂ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ.
ಈ ನಡುವೆ ದುರಂತದಲ್ಲಿ ಮೃತರ ಸಂಖ್ಯೆ 275ನ್ನು ದಾಟಿದ್ದು, ಕನಿಷ್ಠ 240 ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ಈ ನಡುವೆ ಕೇರಳ ಕಂದಾಯ ಸಚಿವ ಕೆ.ರಾಜನ್ ಅವರು ಭೂಕುಸಿತದ ಬಳಿಕ ನಾಪತ್ತೆ ಆಗಿರುವವರ ನಿಖರ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.