ದೇಶವಿಶೇಷಸ್ಥಳೀಯ

ರೈತನ ಮಗಳ ಯಶೋಗಾಥೆ… | ಬಡ ಕುಟುಂಬದ ಯುವತಿಗೆ ಪ್ರತಿಷ್ಠಿತ ಕಂಪೆನಿಯಲ್ಲಿ ₹ 52 ಲಕ್ಷ ರೂ. ಪ್ಯಾಕೇಜ್

ಈ ಸುದ್ದಿಯನ್ನು ಶೇರ್ ಮಾಡಿ

ಕೃಷಿ ಹಿನ್ನೆಲೆ ಹೊಂದಿರುವ ಬಡ ಕುಟುಂಬದ ಆಶ್ರಿತಾ, ಇದೀಗ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪೆನಿಯ ಉದ್ಯೋಗಿ. ವೇತನ ಎಷ್ಟು ಗೊತ್ತೇ? ವರ್ಷಕ್ಕೆ 52 ಲಕ್ಷ ರೂ.

ಯುವ ಪ್ರತಿಭೆ ಆಶ್ರಿತಾ, ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಚೆನ್ನಾಗಿ ಓದಬೇಕು, ಕೈತುಂಬಾ ಸಂಬಳ ನೀಡುವ ಒಳ್ಳೆಯ ಮತ್ತು ಪ್ರತಿಷ್ಠಿತ ಕಂಪನಿಗೆ ಸೇರಬೇಕು ಎಂಬ ಆಶ್ರಿತಾಳ ಕನಸು ಕೈಗೂಡಿದೆ.

SRK Ladders

ತೆಲಂಗಾಣದ ಕರೀಂನಗರದ ಈ ಯುವತಿಯ ಕುಟುಂಬದಲ್ಲಿ ಯಾರೂ ಅಷ್ಟಾಗಿ ಓದಿಕೊಂಡಿಲ್ಲ. ಇವರ ತಂದೆ – ತಾಯಿಗೆ ಗೊತ್ತಿರುವುದು ಕೃಷಿ ಮಾತ್ರ. ಕೃಷಿ ಬಿಟ್ಟರೆ ಆದಾಯ ತಂದುಕೊಡುವ ಯಾವ ಮಾರ್ಗವೂ ಈ ಕುಟುಂಬಕ್ಕೆ ಇಲ್ಲ. ಕಡು ಬಡತನದ ನಡುವೆ ಆರಂಭಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಇಲ್ಲಿಯೇ ಓದು ಮುಗಿಸಿರುವುದು ಈಕೆ ಸಾಧನೆ.

ಬಾಲ್ಯದಿಂದಲೂ ಓದಿನಲ್ಲಿ ಮುಂದಿರುವ ಆಶ್ರಿತಾ, ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿಬೇಕು ಎಂಬ ಛಲ ಹೊಂದಿದ್ದಳು. ವರ್ಷಕ್ಕೆ 52 ಲಕ್ಷ ರೂಪಾಯಿಗಳ ಪ್ಯಾಕೇಜ್ ಪಡೆಯುವ ಖ್ಯಾತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಕ್ಕೆ ಆಕೆಯೇ ಅಚ್ಚರಿ ವ್ಯಕ್ತಪಡಿಸಿದ್ದಾಳೆ. ಹೆಸರಾಂತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಎಂದರೆ ಕಷ್ಟ, ಲಕ್ಷಗಟ್ಟಲೆ ಸಂಬಳ ಕೊಡುವ ಕಂಪನಿ ಸಿಗಬೇಕು ಎಂದರೆ ಅದಕ್ಕೆ ಅದೃಷ್ಟವೂ ಬೇಕು ಎಂಬೆಲ್ಲ ಸಬೂಬುಗಳನ್ನು ಬದಿಗೊತ್ತಿ ಆಶ್ರಿತಾ, ಪ್ರತಿಭೆ ಇದ್ದರೆ ಯಾವ ಕ್ಷೇತ್ರದಲ್ಲಾದರೂ ಲಕ್ಷಗಟ್ಟಲೆ ಸಂಬಳ ಸಿಗುತ್ತದೆ ಎಂಬುದನ್ನು ಸಾಬೀತು ಪಡಿಸಿದ್ದಾಳೆ.

ತನ್ನ ಸ್ನೇಹಿತರೆಲ್ಲ ಸಾಫ್ಟ್‌ವೇರ್ ಉದ್ಯೋಗದತ್ತ ಆಕರ್ಷಿತರಾದರೆ, ಆಶ್ರಿತಾ ಮಾತ್ರ ಹಾರ್ಡ್​ವೇರ್ ಕ್ಷೇತ್ರದತ್ತ ಚಿತ್ತ ನೆಟ್ಟಿದ್ದಳು. ತಾನು ಇದರಲ್ಲಿಯೇ ಸಾಧನೆ ಮಾಡಬೇಕು ಎಂಬ ಹಠ ತೊಟ್ಟಿದ್ದಳು. ಅದರಂತೆ ಪ್ರತಿಭೆ ಇದ್ದರೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮಾತ್ರವಲ್ಲ, ಹಾರ್ಡ್​ವೇರ್ ಕ್ಷೇತ್ರದಲ್ಲೂ ಲಕ್ಷಗಟ್ಟಲೆ ಸಂಬಳ ಸಂಪಾದಿಸಬಹುದು ಎಂದು ಮನಗೊಂಡಿದ್ದಳು.

ಅದರಂತೆ ತಯಾರಿ ನಡೆಸಿ ಆಶ್ರಿತಾ, ಪ್ರತಿಷ್ಠಿತ ಐಐಟಿಯಲ್ಲಿ ಎಂಟೆಕ್ ಸೀಟು ಪಡೆಯಲು ಗೇಟ್ ಪರೀಕ್ಷೆ ಎದುಸಿದ್ದಳು. ಆದರೆ, ಅದು ಅಷ್ಟು ಸುಲಭವಾಗಿರಲಿಲ್ಲ. ಉತ್ತಮ ರ‍್ಯಾಂಕ್ ಗಳಿಸಿದವರಿಗೆ ಮಾತ್ರ ಅವಕಾಶ ಇದ್ದುದರಿಂದ ಅದಕ್ಕೆ ಸಾಕಷ್ಟು ಪ್ರಯತ್ನ ಬೇಕು. ಹಣ ಕೊಟ್ಟು ತರಬೇತಿ ಪಡೆಯುವ ಶಕ್ತಿ ಕೂಡ ಇರಲಿಲ್ಲ. ಹಾಗಾಗಿ, ಉಚಿತ ತರಬೇತಿ ಶಿಬಿರ ಸೇರಿಸಿಕೊಂಡು ತನ್ನ ಪ್ರಯತ್ನ ಮುಂದುವರೆಸಿದ್ದಳು. 2021ರ ಗೇಟ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ 3000 ರ‍್ಯಾಂಕ್ ಪಡೆದು ವಿಫಲರಾಗಿದ್ದ ಆಶ್ರಿತಾ, 2022ರ ಎರಡನೇ ಬಾರಿಯ ಪರೀಕ್ಷೆಯಲ್ಲಿ ಕಠಿಣ ಪರಿಶ್ರಮದಿಂದ ದೇಶಕ್ಕೆ 36ನೇ ರ‍್ಯಾಂಕ್ ಪಡೆದು ತನ್ನ ಆಯ್ಕೆಯ ಐಐಟಿಯಲ್ಲಿ ಎಂಟೆಕ್ ಪೂರ್ಣಗೊಳಿಸಿದಳು.

ಈ ನಡುವೆ ಸರ್ಕಾರಿ ನೌಕರಿ ಸೇರಿದಂತೆ, ISRO, DRDO, BARC, ಮತ್ತು NPCIL ನಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗಾವಕಾಶಗಳು ತನ್ನನ್ನು ಹುಡುಕಿಕೊಂಡು ಬಂದರೂ, ಅವುಗಳನ್ನು ಬಿಟ್ಟು ಆಶ್ರಿತಾ ಐಐಟಿ ಬೆಂಗಳೂರಿನಲ್ಲಿ ಎಂಟೆಕ್ ಮಾಡಿ ತನ್ನ ಇಚ್ಛೆಯ ಆಸೆಯನ್ನು ಪೂರ್ಣಗೊಳಿಸಿದಳು. ಇತ್ತೀಚೆಗಷ್ಟೇ ಎಂ.ಟೆಕ್ ಮುಗಿಸಿರುವ ಆಶ್ರಿತಾಗೆ ಎನ್‌ವಿಡಿಯಾ ಎಂಬ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪನಿಯು ವರ್ಷಕ್ಕೆ 52 ಲಕ್ಷ ರೂಪಾಯಿಗಳ ಪ್ಯಾಕೇಜ್‌ ನೀಡುವ ಮೂಲಕ ಆಫರ್​ ನೀಡಿದೆ.

‘ಬಿ.ಟೆಕ್ ಮುಗಿಸಿ ಗೇಟ್​​ನಲ್ಲಿ ಅತ್ಯುತ್ತಮ ರ‍್ಯಾಂಕ್ ಗಳಿಸಬೇಕು ಎಂಬ ಆಸೆ ಇತ್ತು. ಆ ಆಸೆಯನ್ನು ರಿಗಾ ಅಕಾಡೆಮಿಗೆ ಸೇರುವ ಮೂಲಕವೇ ಈಡೇರಿದೆ. ಗುರು ಚಿಂತಲ ರಮೇಶ್ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು” ಎಂದು ಆಶ್ರಿತಾ ಖುಷಿ ಹಂಚಿಕೊಂಡಿದ್ದಾರೆ.

”ನಮ್ಮದು ಕೃಷಿ ಕುಟುಂಬ. ತಮ್ಮ ಮಗಳು ಕಷ್ಟದ ಜೀವನದಲ್ಲೂ ಓದಿ ಈ ಮಟ್ಟಕ್ಕೆ ಬಂದಿರುವುದು ನಮಗೆ ಖುಷಿ ತರಿಸಿದೆ. ನಾವು ಕಾಣುತ್ತಿದ್ದ ಕನಸುಗಳನ್ನು ಮೀರಿ ಈ ಸಾಧನೆ ಮಾಡಿದ್ದಾಳೆ” ಎಂದು ಆಶ್ರಿತಾಳ ತಂದೆ – ತಾಯಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3