ವಿಜಯವಾಡ: ಟಿಡಿಪಿ ಮುಖ್ಯಸ್ಥ, ನಿಯೋಜಿತ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರು ಮಂಗಳವಾರ ವಿಜಯವಾಡದಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಅಮರಾವತಿ ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಿದ್ದಾರೆ.
ಟಿಡಿಪಿ-ಜೆಎಸ್‌ಪಿ-ಬಿಜೆಪಿ ಶಾಸಕರು ಎ-ಕನ್ವೆನ್ಷನ್ ಸೆಂಟರ್‌ನಲ್ಲಿ ಸಭೆ ನಡೆಸಿ ಚಂದ್ರಬಾಬು ನಾಯ್ಡು ಅವರನ್ನು ಸಿಎಂ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅಟ್ಚನ್ ನಾಯ್ಡು ಅವರು ಚಂದ್ರಬಾಬು ನಾಯ್ಡು ಅವರನ್ನು ಟಿಡಿಎಲ್‌ಪಿ ನಾಯಕರಾಗಿ ಆಯ್ಕೆ ಮಾಡಿದ್ದಾರೆ ಎಂದು ಘೋಷಿಸಿದರು.
ಆಯ್ಕೆಯಾದ ನಂತರ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾತನಾಡಿದ ನಾಯ್ಡು, ಜನರು ನೀಡಿದ ತೀರ್ಪನ್ನು ಎತ್ತಿ ಹಿಡಿಯುವ ಜವಾಬ್ದಾರಿ ನಮ್ಮ ಮೇಲಿದೆ. 3 ಪಕ್ಷಗಳ ಮುಖಂಡರು, ಕಾರ್ಯಕರ್ತರು ನೂರಕ್ಕೆ ನೂರು ಪ್ರತಿಶತ ಒಗ್ಗಟ್ಟಾಗಿ ಕೆಲಸ ಮಾಡಿದರು. ಚುನಾವಣೆಯಲ್ಲಿ ಶೇ.93ರಷ್ಟು ಸ್ಥಾನಗಳನ್ನು ಗೆಲ್ಲುವುದು ದೇಶದ ಇತಿಹಾಸದಲ್ಲೇ ಅಪರೂಪ. ಚುನಾವಣೆಯಲ್ಲಿ ಜನರು 57 ರಷ್ಟು ಮತಗಳನ್ನು ಪಡೆದು ಆಶೀರ್ವದಿಸಿದ್ದಾರೆ. ನಾವೆಲ್ಲರೂ ಹೆಚ್ಚು ಜವಾಬ್ದಾರಿಯುತರಾಗಬೇಕು ಎಂದು ಹೇಳಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಸಹಕಾರ ಅಗತ್ಯ
ಪ್ರಧಾನಿ ಮೋದಿ ಮತ್ತು ಎನ್‌ಡಿಎ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ಕೆಲಸ ಮಾಡುವ ಸಮಯ ಬಂದಿದೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಸಹಕಾರ ಅತ್ಯಗತ್ಯ. ರಾಜ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಕೇಂದ್ರ ನಾಯಕರು ಹೇಳಿದ್ದಾರೆ. ಆಂಧ್ರಪ್ರದೇಶ ಪಾಳುಬಿದ್ದಿದ್ದು, ಅದನ್ನು ಪುನಶ್ಚೇತನಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.
ರಾಜಧಾನಿ ಕುರಿತು ಮಾತನಾಡಿದ ಅವರು, ಮೂರು ರಾಜಧಾನಿ ಎಂಬುದೇ ಇಲ್ಲ. ಅಮರಾವತಿ ರಾಜಧಾನಿಯಾಗಲಿದೆ. ವಿಶಾಖಪಟ್ಟಣವನ್ನು ಆರ್ಥಿಕ ಮತ್ತು ಆಧುನಿಕ ರಾಜಧಾನಿಯನ್ನಾಗಿ ಮಾಡೋಣ ಎಂದು ಹೇಳಿದ್ದಾರೆ. ಅಮರಾವತಿಯನ್ನು ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂ ಕಾರ್ಯಕಾರಿ ರಾಜಧಾನಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಎಂದು ಹಿಂದಿನ ವೈಎಸ್ಆರ್ಸಿಪಿ (YSRCP) ಸರ್ಕಾರ ಪರಿಕಲ್ಪನೆ ಹೊಂದಿತ್ತು.