ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹಾರಿದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವೀಡಿಯೋ ಮೂಲಕ ಮಾತನಾಡಿರುವ ಪ್ರಜ್ವಲ್, ಮೇ 31ಕ್ಕೆ ಬೆಂಗಳೂರಿಗೆ ಬಂದು ಎಸ್ ಐಟಿ ಎದುರು ಹಾಜರಾಗುವುದಾಗಿ ತಿಳಿಸಿದ್ದಾರೆ.
ತಂದೆ, ತಾಯಿ, ಕುಮಾರಣ್ಣ, ಹಾಸನದ ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ಕ್ಷಮೆ ಕೇಳುತ್ತೇನೆ. ತನ್ನ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಮೇ 31ರಂದು ಬೆಳಗ್ಗೆ 10 ಗಂಟೆಗೆ ಎಸ್ ಐಟಿ ಮುಂದೆ ಹಾಜರಾಗುತ್ತೇನೆ. ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಸುಳ್ಳಿನ ಪ್ರಕರಣಗಳಿಂದ ಆಚೆ ಬರುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ನನ್ನ ವಿರುದ್ದ ಷಡ್ಯಂತ್ರ ನಡೆದಿದೆ. ಇದನ್ನು ತಿಳಿದು ಬೇಸರಗೊಂಡು ದೂರವಾಗಿದ್ದೆ. ಮೇ 31ಕ್ಕೆ ಬರುತ್ತೇನೆ. ತಾತ, ತಂದೆ, ತಾಯಿ ಹಾಗೂ ಪಕ್ಷದ ಕಾರ್ಯಕರ್ತರ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.
ನಾನು ವಿದೇಶಕ್ಕೆ ಹೋಗುವುದು ಮೊದಲೇ ನಿಗದಿಯಾಗಿತ್ತು. ಪೂರ್ವನಿಗದಿ ಕಾರ್ಯಕ್ರಮದಂತೆ ವಿದೇಶಕ್ಕೆ ಹೋಗಿದ್ದೇನೆ. ಆಗ ನನ್ನ ಮೇಲೆ ಯಾವುದೇ ಪ್ರಕರಣ, ಕೇಸ್ ಆಗಲಿ ಇರಲಿಲ್ಲ. ಎಸ್ ಐಟಿ ರಚನೆಯೂ ಆಗಿರಲಿಲ್ಲ. ನಾನು ವಿದೇಶಕ್ಕೆ ಹೋದ ಬಳಿಕ ನ್ಯೂಸ್ ಚಾನೆಲ್ ಹಾಗೂ ಯೂಟ್ಯೂಬ್ ನೋಡಿದಾಗ ಈ ಮಾಹಿತಿ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.