Gl
ವಿಶೇಷಸ್ಥಳೀಯ

ಸೋತು ಗೆದ್ದ ಜಗತ್ತಿನ ಸಾಧಕರಿವರು

ಈ ಸುದ್ದಿಯನ್ನು ಶೇರ್ ಮಾಡಿ

ಜೀವನದಲ್ಲಿ ಉನ್ನತ ಸಾಧನೆಗೈದ ಕೆಲ ದಿಗ್ಗಜರ ಹೆಸರು, ಅವರ ಮುಖ ಹಾಗೂ ಅವರ ಪ್ರೇರಣಾದಾಯಕ ಕತೆಗಳು ಜಗತ್ತಿನಾದ್ಯಂತ ಚಿರಪರಿಚಿತ. ಎಲ್ಲರೂ ಅವರ ಮಹೋನ್ನತ ಸಾಧನೆಯನ್ನು ಕೊಂಡಾಡುತ್ತಾರೆ. ಇಂದು ಅವರೆಲ್ಲ ಅಷ್ಟು ಉನ್ನತ ಮಟ್ಟಕ್ಕೇರಬೇಕಾದರೆ ಅದೆಷ್ಟು ವೈಫಲ್ಯಗಳನ್ನು ಮೆಟ್ಟಿ ನಿಂತಿದ್ದಾರೆ ಎಂಬ ಬಗ್ಗೆ ಮಾತ್ರ ಬಹುತೇಕರಿಗೆ ತಿಳಿದಿಲ್ಲ. ಓಪ್ರಾ ವಿನ್‌ಫ್ರೆ ರಿಂದ ಹಿಡಿದು ಹೆನ್ರಿ ಫೋರ್ಡ್‌ರವರಂಥ ಮಹಾನ್ ಸಾಧಕರು ತಮ್ಮ ಜೀವನದಲ್ಲಿ ಎಷ್ಟು ಸಂಘರ್ಷ ನಡೆಸಿದ್ದಾರೆ ಎಂಬುದನ್ನು ತಿಳಿದರೆ ಅಚ್ಚರಿಯಾಗುವುದು. ತಮ್ಮ ವೈಫಲ್ಯಗಳನ್ನೇ ಯಶಸ್ಸಿನ ಮೆಟ್ಟಿಲಾಗಿಸಿ ಸಾಧನೆ ಮಾಡಿದ ಜಗತ್ತಿನ ಐವರು ಪ್ರಮುಖ ಸಾಧಕರ ಜೀವನ ಹೇಗಿತ್ತು ತಿಳಿಯೋಣ.

rachana_rai
Pashupathi
akshaya college
Balakrishna-gowda

1. ಓಪ್ರಾ ವಿನ್‌ಫ್ರೆ
ಮೊಟ್ಟ ಮೊದಲ ಕಪ್ಪು ವರ್ಣೀಯ ಬಿಲಿಯನೇರ್ ಎಂದು ಕರೆಸಿಕೊಳ್ಳುವ ಓಪ್ರಾ ಅವರ ಆರಂಭಿಕ ಜೀವನ ಬಹಳ ಸಂಘರ್ಷಮಯವಾಗಿತ್ತು. ಅವರ ಬಾಲ್ಯ ಕೇವಲ ಹೋರಾಟ ಹಾಗೂ ನಿರಾಸೆಗಳಿಂದ ತುಂಬಿ ಹೋಗಿತ್ತು. ದುಡಿದು ಹೊಟ್ಟೆ ತುಂಬಿಕೊಳ್ಳುವ ಕುಟುಂಬದಲ್ಲಿ ಹುಟ್ಟಿದ ಓಪ್ರಾ ಅವರು ಬಡತನದಲ್ಲಿಯೇ ಬದುಕಬೇಕಾಯಿತು. ಅವರ ತಾಯಿ ದಿನಗೂಲಿ ಕೆಲಸ ಹಾಗೂ ತಂದೆ ಸಣ್ಣ ಪ್ರಮಾಣದ ಕಟ್ಟಡ ಕಾರ್ಮಿಕರಾಗಿದ್ದರು. ಇಂಥ ಕಷ್ಟದ ಕುಟುಂಬದಲ್ಲಿ ಜನಿಸಿದ ಓಪ್ರಾ ತಮ್ಮ 9 ರಿಂದ 13ನೇ ವಯಸ್ಸಿನಲ್ಲಿ ಸಾಕಷ್ಟು ದೌರ್ಜನ್ಯಗಳಿಗೆ ತುತ್ತಾದರು. ಅಷ್ಟೇ ಅಲ್ಲದೆ 14ನೇ ವಯಸ್ಸಿಗೆ ಗರ್ಭಿಣಿಯಾಗುವ ಆಘಾತವನ್ನೂ ಅವರು ಎದುರಿಸಿದರು. ಇಷ್ಟೆಲ್ಲ ಕಷ್ಟಗಳಿದ್ದರೂ ಛಲ ಬಿಡದ ಅವರು ಹೋರಾಟವನ್ನೇ ಜೀವನವನ್ನಾಗಿಸಿಕೊಂಡು ಇಂದು ಉತ್ತುಂಗದ ಸಾಧನೆ ಮಾಡಿದ್ದಾರೆ.
ಒಂದು ಕಾಲಕ್ಕೆ ಟಿವಿಯಲ್ಲಿ ಮುಖ ತೋರಿಸಲು ಲಾಯಕ್ಕಿಲ್ಲ ಎಂದು ತಿರಸ್ಕರಿಸಲ್ಪಟ್ಟಿದ್ದ ಓಪ್ರಾ ಮುಂದಿನ ದಿನಗಳಲ್ಲಿ ಜಗತ್ತಿಗೇ ಪ್ರೇರಣೆ ನೀಡಬಲ್ಲ ವ್ಯಕ್ತಿಯಾಗಿ ರೂಪುಗೊಂಡರು. ಜೀವನದ ಪ್ರತಿ ಹಂತದಲ್ಲಿ ಎದುರಾದ ಸಮಸ್ಯೆಗಳಿಂದ ಓಪ್ರಾ ಮತ್ತಷ್ಟು ಬಲಿಷ್ಠರಾದರೇ ಹೊರತು ಸೋಲನ್ನು ಒಪ್ಪಿಕೊಳ್ಳಲಿಲ್ಲ. ಓಪ್ರಾ ಅವರ ಹೋರಾಟ ಹಾಗೂ ಜೀವನ ಸಾಧನೆ ಇಂದಿನ ಎಲ್ಲರಿಗೂ ಪ್ರೇರಣಾದಾಯಿಯಾಗಿದೆ.

pashupathi

2. ವಾಲ್ಟ್ ಡಿಸ್ನಿ
ಹಾಳೆಯ ಮೇಲೆ ಇಲಿಯ ಚಿತ್ರ ಬಿಡಿಸುವ ಕಲಾವಿದನಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಒಮ್ಮೆಯಲ್ಲ, ನೂರಾರು ಬಾರಿ ಸೋಲು ಅವರನ್ನು ಬೆನ್ನು ಬಿಡದೆ ಕಾಡಿತ್ತು. ಇವರು ತಮ್ಮ 20ನೇ ವಯಸ್ಸಿನಲ್ಲಿರುವಾಗ ಕಲ್ಪನಾಶಕ್ತಿ ಹಾಗೂ ಕ್ರಿಯಾಶೀಲತೆಯೇ ನಿನ್ನಲ್ಲಿ ಇಲ್ಲ ಎಂದು ಕಂಪನಿಯ ಎಡಿಟರ್ ಕೆಲಸದಿಂದ ಕಿತ್ತು ಹಾಕಿದ್ದರು. ಸೋಲಿನಿಂದ ಕಂಗೆಡದ ಡಿಸ್ನಿ, Laugh O’ Gram ಎಂಬ ತಮ್ಮದೇ ಕಂಪನಿ ಆರಂಭಿಸಿದರಾದರೂ ಅದೂ ಸಹ ಕೆಲವೇ ತಿಂಗಳಲ್ಲಿ ನಷ್ಟಕ್ಕೆ ತುತ್ತಾಯಿತು. ಇಂದು ಜಗತ್ ಪ್ರಸಿದ್ಧವಾಗಿರುವ ಮಿಕ್ಕಿ ಮೌಸ್ ಕ್ಯಾರೆಕ್ಟರ್ ರಚನೆ ಮಾಡಿದಾಗಲೂ ಸಹ ಯಾವುದೇ ವಿತರಕರು ಅದನ್ನು ಕೊಂಡುಕೊಳ್ಳಲು ಆವತ್ತು ಮುಂದಾಗಿರಲಿಲ್ಲ. ಯಾವಾಗ ಮೂಕಿ ಚಿತ್ರಗಳ ಯುಗ ಕಳೆದು ಟಾಕಿ ಚಿತ್ರಗಳ ಯುಗ ಆರಂಭವಾಯಿತು ಆಗ ಡಿಸ್ನಿ ಅವರ ಪ್ರತಿಭೆಗೆ ಜಾಗತಿಕ ಮನ್ನಣೆ ದೊರಕಿತು. ತಮ್ಮ ಮೊದಲ ವೈಫಲ್ಯಕ್ಕೆ ಹೆದರಿ ಡಿಸ್ನಿ ಮುಂದಡಿ ಇಡದಿದ್ದರೆ ಇಂದು ನಾವೆಲ್ಲ ಮಿಕ್ಕಿ ಮೌಸ್ ಮಿಸ್ ಮಾಡಿಕೊಳ್ಳುತ್ತಿದ್ದೆವು.. ಅಲ್ಲವೆ?

3. ಹೆನ್ರಿ ಫೋರ್ಡ್
ಫೋರ್ಡ್ ಮೋಟರ್ ಕಂಪನಿಯ ಜನಕರಾದ ಹೆನ್ರಿ ಫೋರ್ಡ್ ಅವರ ಸಾಧನೆ ಅಮೋಘವಾಗಿದೆ. ಈಗ ಫೋರ್ಡ್ ಕಾರುಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಎರಡು ಬಾರಿ ಕಂಪನಿ ಆರಂಭಿಸಿದ್ದ ಹೆನ್ರಿ, ಎರಡೂ ಸಲ ದಿವಾಳಿಯಾಗಿದ್ದರು ಎಂಬುದು ಬಹುತೇಕರಿಗೆ ತಿಳಿದಿಲ್ಲ. 1889ರಲ್ಲಿ ಆಗ ಮರಗೆಲಸ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿದ್ದ ವಿಲಿಯಂ ಎಚ್. ಮರ್ಫಿ ಅವರೊಂದಿಗೆ ಜೊತೆಯಾಗಿ ಡೆಟ್ರಾಯಿಟ್ ಅಟೊಮೊಬೈಲ್ ಕಂಪನಿ ಆರಂಭಿಸಿದ್ದರು. ಇದು ಕೆಲವೇ ದಿನಗಳಲ್ಲಿ ದಿವಾಳಿಯಾಯಿತು.
1901ರಲ್ಲಿ ಮತ್ತೆ ಪ್ರಯತ್ನಕ್ಕೆ ಕೈ ಹಾಕಿದ ಅವರು ಹೆನ್ರಿ ಫೋರ್ಡ್ ಕಂಪನಿ ಸ್ಥಾಪಿಸಿದರು. ಆದರೆ ಕೊನೆಗೆ ಇವರ ಕೈಯಲ್ಲಿ ಕಂಪನಿಯ ಹಕ್ಕುಸ್ವಾಮ್ಯ ಬಿಟ್ಟು ಮತ್ತೇನೂ ಉಳಿಯಲಿಲ್ಲ. ನಂತರ ಇದೇ ಕಂಪನಿ ಕ್ಯಾಡಿಲಾಕ್ ಅಟೊಮೊಬೈಲ್ ಎಂದು ಮರುನಾಮಕರಣವಾಯಿತು. ಇದು ಫೋರ್ಡ್ ಅವರ ಮೂರನೇ ಪ್ರಯತ್ನವಾಗಿತ್ತು. ಇದರ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಫೋರ್ಡ್ ಕಾರು ಕಂಪನಿ ಇಂದು ಜಗದ್ವಿಖ್ಯಾತ ಇತಿಹಾಸ.

4. ಕೊಲೊನೆಲ್ ಸ್ಯಾಂಡರ್ಸ್
ಕೆಂಟುಕಿ ಫ್ರೈಡ್ ಚಿಕನ್ ಹೆಸರು ಕೇಳಿದಾಕ್ಷಣ ಬಾಯಲ್ಲಿ ನೀರೂರುತ್ತದೆ. ರುಚಿಕಟ್ಟಾದ ಚಿಕನ್ ತಿಂಡಿಗೆ ಕೆಎಫ್‌ಸಿ ಎಲ್ಲರ ಅಚ್ಚು ಮೆಚ್ಚಿನದಾಗಿದೆ. ಆದರೆ ಇಂಥ ಸ್ವಾದಿಷ್ಟ, ಗುಣ ಮಟ್ಟದ ಚಿಕನ್ ಊಟದ ಕಂಪನಿಯನ್ನು ಬೆಳೆಸುವ ಮೊದಲು ಇದರ ಸ್ಥಾಪಕರು ಅದೆಷ್ಟು ಬಾರಿ ಕೈ ಸುಟ್ಟುಕೊಂಡಿದ್ದಾರೆ ಎಂಬುದನ್ನು ತಿಳಿದರೆ ಅಚ್ಚರಿಯಾಗುತ್ತದೆ. ಕೊಲೊನೆಲ್ ಸ್ಯಾಂಡರ್ಸ್ ಪ್ರಥಮ ಬಾರಿ ತಮ್ಮ ವಿಶಿಷ್ಟ ಚಿಕನ್ ತಿಂಡಿ ಮಾರಾಟ ಮಾಡಲು ಯತ್ನಿಸಿದಾಗ 1009 ಜನ ಅದನ್ನು ತಿರಸ್ಕರಿಸಿದ್ದರು.
ಆದರೆ ಸೋಲಿಗೆ ಕಂಗೆಡದ ಸ್ಯಾಂಡರ್ಸ್ ಚಿಕ್ಕ ಪುಟ್ಟ ಕೆಲಸ ಮಾಡುತ್ತ ಪರ್ಫೆಕ್ಟ್ ಚಿಕನ್ ರೆಸಿಪಿ ತಯಾರಿಸಿಯೇ ಬಿಟ್ಟರು. ಆದರೆ ಈ ಹಂತದಲ್ಲಿ ಅಗ್ನಿಶಾಮಕ ದಳದಲ್ಲಿ ಫೈರ್‌ಮ್ಯಾನ್ ಆಗಿ, ಟೈರ್ ಸೇಲ್ಸ್‌ಮ್ಯಾನ್ ಆಗಿ ವಿವಿಧ ಕೆಲಸ ಮಾಡಬೇಕಾಯಿತು. ಆದರೆ ಸೂಕ್ತವಾದ ಸಾಸ್ ಹಾಗೂ ಇತರ ಪದಾರ್ಥಗಳೊಂದಿಗೆ ಚಿಕನ್ ಫ್ರೈ ಮಾಡಿ ರುಚಿಕಟ್ಟಾದ ಚಿಕನ್ ರೆಸಿಪಿ ಕಂಡು ಹಿಡಿದರು.
1952ರಲ್ಲಿ ತಮ್ಮ ಮೊದಲ ಕೆಎಫ್‌ಸಿ ರೆಸ್ಟೊರೆಂಟ್ ಆರಂಭಿಸಿದ ಸ್ಯಾಂಡರ್ಸ್ ಅವರಿಗೆ ಕೊನೆಗೂ ಯಶಸ್ಸು ದೊರಕಿತು. 1964ರ ಹೊತ್ತಿಗೆ ಕಂಪನಿ ಅದ್ಭುತ ಏಳಿಗೆ ಸಾಧಿಸಿತು. 1964ರಲ್ಲಿ ಸ್ಯಾಂಡರ್ಸ್ ತಮ್ಮ 72ನೇ ವಯಸ್ಸಿನಲ್ಲಿ ಕಂಪನಿಯನ್ನು ಜಾಕ್ ಸಿ. ಮ್ಯಾಸೆ ಹಾಗೂ ಜಾನ್ ವೈ. ಬ್ರೌನ್ ಎಂಬುವರಿಗೆ 2 ಮಿಲಿಯನ್ ಡಾಲರ್ ಮೊತ್ತಕ್ಕೆ ಮಾರಿದರು. ಆದರೆ ಹಕ್ಕುಗಳನ್ನು ಮಾತ್ರ ಕೆನಡಿಯನ್ ಕಂಪನಿಯೊಂದಕ್ಕೆ ಇಟ್ಟುಕೊಂಡು ತಾವು ಸಂಬಳ ಪಡೆಯುವ ಕಂಪನಿ ರಾಯಭಾರಿಯಾಗಿ ಮುಂದುವರೆದರು. ಹೊಟ್ಟೆ ತುಂಬ ಊಟ ಉತ್ತಮ ವ್ಯಕ್ತಿಯನ್ನು ನಿರ್ಮಿಸುತ್ತದೆ ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿದವರು ಕೊಲೊನೆಲ್ ಸ್ಯಾಂಡರ್ಸ್.

5. ಥಾಮಸ್ ಎಡಿಸನ್
ಥಾಮಸ್ ಎಡಿಸನ್ ಬಗ್ಗೆ ನಾವೆಲ್ಲ ತಿಳಿದಿದ್ದೇವೆ. ತಮ್ಮ ಸಂಶೋಧನೆಯನ್ನು ಕಾರ್ಯಗತಗೊಳಿಸುವ ಮೊದಲು ಇವರು 10 ಸಾವಿರ ಬಾರಿ ವಿಫಲತೆ ಕಂಡಿದ್ದರು. ಇಂದು ಜಗತ್ತು ಬೆಳಕಾಗಲು ಕಾರಣವಾದ ಎಲೆಕ್ಟ್ರಿಕ್ ಬಲ್ಬ್ ಕಂಡು ಹಿಡಿಯಲು ಇವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಟೀಚರ್‌ಗಳಿಂದ ಹಿಡಿದು ಬಂಧು ಮಿತ್ರರೆಲ್ಲರೂ ಎಡಿಸನ್ ಯಶಸ್ಸು ಗಳಿಸಲಾರರೆಂದೇ ತಿಳಿದಿದ್ದರು. ಆದರೆ ತಮ್ಮ ಐದನೇ ವಯಸ್ಸಿಗೇ ಎಡಿಸನ್ ಏನಾದರೂ ನಿರಾಶರಾಗಿದ್ದರೆ ಇಂದು ಜಗತ್ತು ಹೇಗಿರುತ್ತಿತ್ತು ಎಂದು ಊಹಿಸಿ ನೋಡಿ.

ಕೊನೆ ಮಾತು
ಜಗತ್ತು ಅಸಾಧಾರಣ ಸಂಶೋಧಕರು ಹಾಗೂ ಕ್ರಿಯಾಶೀಲ ವ್ಯಕ್ತಿಗಳಿಂದ ತುಂಬಿದೆ. ಅಂದಿನ ಕ್ರಿಯಾಶೀಲರು ತಮ್ಮ ಪ್ರಯತ್ನಗಳನ್ನು ಮಾಡದೇ ಇದ್ದಿದ್ದರೆ ಇಂದು ನಾವು ನೋಡುತ್ತಿರುವ ತಂತ್ರಜ್ಞಾನದ ಆವಿಷ್ಕಾರವನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಇವರಲ್ಲದೆ ಇನ್ನೂ ಹಲವಾರು ಸಾಧಕರು ನಿಮಗೆ ಗೊತ್ತಿರಬಹುದು. ಅವರೆಲ್ಲರಿಗೂ ನಮ್ಮ ಸಲಾಮ್..


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

1 of 104