ಗೋವಿಂದ ಕೋಟಿ ಬರೆದ 17 ವರ್ಷದ ಬೆಂಗಳೂರು ಬಾಲಕಿಗೆ ಶ್ರೀವಾರಿ ಅನುಗ್ರಹ ಪ್ರಾಪ್ತಿಯಾಗಿದೆ. ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವರ ಸಮೀಪ ದರ್ಶನ ಪಡೆದು ಪುನೀತರಾಗಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ ಟ್ವೀಟ್ ಮಾಡಿದೆ.
ಬೆಂಗಳೂರು ಬಾಲಕಿ ಕುಮಾರಿ ಕೀರ್ತನಾ (17) ಗೋವಿಂದ ಕೋಟಿ ಬರೆದು ತಿರುಮಲ ತಿರುಪತಿ ಸನ್ನಿಧಾನಕ್ಕೆ ಒಪ್ಪಿಸಿದ ಬಾಲಕಿ. ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ಸಮೀಪ ದರ್ಶನ ಪಡೆದು ಭಾವಪರವಶರಾದರು. ಇಷ್ಟ ದೇವರ ದರ್ಶನ ಭಾಗ್ಯ ಪಡೆದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಟಿಟಿಡಿ ಟ್ವೀಟ್ ಮಾಡಿದೆ.
ಪ್ರತಿಷ್ಠಿತ ‘ಗೋವಿಂದ ಕೋಟಿ’ಯನ್ನು ಕಡಿಮೆ ಸಮಯದಲ್ಲಿ ಮುಗಿಸಿ ಅಪರೂಪದ ದಾಖಲೆಯನ್ನು ಕೀರ್ತನಾ ಮಾಡಿದ್ದಾರೆ. ತಮಗಾದ ದಿವ್ಯ ಅನುಭವವನ್ನು ಹಂಚಿಕೊಂಡ ಕೀರ್ತನಾ, ರಾಮಕೋಟಿ ಬರೆಯುವ ಸಂಪ್ರದಾಯ ಭಾರತೀಯ ಸಮಾಜದಲ್ಲಿ ಹಲವಾರು ದಶಕಗಳಿಂದ ಚಾಲ್ತಿಯಲ್ಲಿದೆ. ಚಿಕ್ಕಂದಿನಿಂದಲೂ ತನ್ನ ಹಿರಿಯರು, ಊರಿನವರು ರಾಮಕೋಟಿ ಬರೆಯುವುದನ್ನು ನೋಡಿದ್ದೆ ಎಂದು ಹೇಳಿಕೊಂಡಿದ್ದಾರೆ.
2023ರ ನವರಾತ್ರಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪೆಯಿಂದ ಗೋವಿಂದ ಕೋಟಿ ಬರೆಯುವ ಅವಕಾಶ ಸಿಕ್ಕಿತು. ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟಶಾಲಿ ಎಂದು ಅವರು ಹೇಳಿದರು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅತ್ಯಂತ ಭಕ್ತಿಯಿಂದ ಬರೆಯುತ್ತಾ ಬಂದೆ ಎಂದು ಕೀರ್ತನಾ ವಿವರಿಸಿದರು.
ಕುಮಾರಿ ಕೀರ್ತನಾ ಕಡಿಮೆ ಅವಧಿಯಲ್ಲಿ ಗೋವಿಂದ ಕೋಟಿ ಪೂರೈಸಿ ಟಿಟಿಡಿಯ ಗಮನ ಸೆಳೆದಿದ್ದಾರೆ. ಈ ಮೂಲಕ ಇದೇ ಪ್ರಥಮ ಬಾರಿಗೆ ಬೆಂಗಳೂರಿನ ಇಂಟರ್ ವಿದ್ಯಾರ್ಥಿಯೊಬ್ಬರು 10 ಲಕ್ಷ 1,116 ಬಾರಿ ಗೋವಿಂದ ಕೋಟಿ ಬರೆದ ದಾಖಲೆ ಬರೆದಿದ್ದಾರೆ. ಅವರ ಈ ಪ್ರಯತ್ನ ಇತರೆ ವಿದ್ಯಾರ್ಥಿ ಯುವಜನರಿಗೂ ಪ್ರೇರಣೆಯಾಗಲಿ ಎಂದು ಟಿಟಿಡಿ ಆಶಯ ವ್ಯಕ್ತಪಡಿಸಿದೆ.
ವಿದ್ಯಾರ್ಥಿಗಳು, ಯುವಕ-ಯುವತಿಯರಲ್ಲಿ ಆಧ್ಯಾತ್ಮಿಕತೆಯನ್ನು ಬೆಳೆಸಲು ಟಿಟಿಡಿಯು ”ಗೋವಿಂದ ಕೋಟಿ” ಬರೆಯುವ ಬೃಹತ್ ಕಾರ್ಯಕ್ರಮವನ್ನು ಇತ್ತೀಚೆಗೆ ಪರಿಚಯಿಸಿತ್ತು. ಇದರ ಭಾಗವಾಗಿ, 10,01,116 ಬಾರಿ ಗೋವಿಂದ ಕೋಟಿ ಬರೆದವರಿಗೆ (ವ್ಯಕ್ತಿಗಳಿಗೆ ಮಾತ್ರ) ಬ್ರೇಕ್ ದರ್ಶನವನ್ನು ನೀಡಲು ಮತ್ತು ಗೋವಿಂದ 10,01,116 ಬಾರಿ ಬರೆದವರ (ವ್ಯಕ್ತಿಗಳಿಗೆ) ಇಡೀ ಕುಟುಂಬಕ್ಕೆ ಬ್ರೇಕ್ ದರ್ಶನ ನೀಡುವುದಾಗಿ ಟಿಟಿಡಿ ಘೋಷಿಸಿತ್ತು.