ಮಂಗಳೂರು:ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಇ-ಖಾತಾ ಮತ್ತು ಇ-ಸ್ವತ್ತುಗಳನ್ನು ತ್ವರಿತವಾಗಿ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿದರು.
ಕಟ್ಟಡ ನಿರ್ಮಾಣ, ನಿವೇಶನ ನಕ್ಷೆ ಮಂಜೂರಾತಿ ಸೇರಿದಂತೆ ವಿವಿಧ ಆಡಳಿತಾತ್ಮಕ ಅನುಮತಿಗಳಿಗೆ ಇ-ಖಾತಾ ಹಾಗೂ ಇ-ಸ್ವತ್ತು ಅವಶ್ಯಕವಾಗಿದ್ದು, ತಾಂತ್ರಿಕ ತೊಂದರೆಗಳಿಂದ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವುದಾಗಿ ಸಚಿವರು ತಿಳಿಸಿದರು. ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಸೂಚನೆ ನೀಡಿದರು.ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರು, ಫೆಬ್ರವರಿ ತಿಂಗಳಲ್ಲಿ 1,058 ಇ-ಖಾತಾಗಳನ್ನು ವಿತರಿಸಿರುವುದಾಗಿ ಮಾಹಿತಿ ನೀಡಿದರು.
ಇನ್ನು,ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ರಂಗಮಂದಿರ ಕಾಮಗಾರಿಗೆ ಶೀಘ್ರ ಚಾಲನೆ ನೀಡಲು ಸೂಚನೆ ನೀಡಿದರು.ಬಂಟ್ವಾಳದ ಪಂಜ ಮಂಗೇಶರರಾಯ ಭವನ ಕಾಮಗಾರಿ ವೇಗಗೊಳಿಸಲು ನಿರ್ದೇಶಿಸಿದರು.ಅತ್ತಾವರದಲ್ಲಿರುವ ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿಗೆ ಅರಣ್ಯ ಸಂಬಂಧಿತ ಅಡೆತಡೆಗಳನ್ನು ಶೀಘ್ರ ನಿವಾರಿಸಲು ಸೂಚನೆ ಕೊಟ್ಟರು. ಗ್ರಾಮಾಂತರ ಪ್ರದೇಶಗಳಲ್ಲಿ ವಿನ್ಯಾಸ ಮತ್ತು ನಕ್ಷೆ ಅನುಮೋದನೆ ಪ್ರಕ್ರಿಯೆ ವೇಗಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡುವಂತೆ ಸೂಚಿಸಲಾಗಿದೆ.
ತ್ಯಾಜ್ಯ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿದ ನೀರನ್ನು ಕೈಗಾರಿಕೆಗಳಿಗೆ ಬಳಸುವ ಸಾಧ್ಯತೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಡಿ ನಡೆದ ಕಾಮಗಾರಿಗಳಿಗೆ ತೃತೀಯಪಕ್ಷ ಪರಿಶೀಲನೆ ನಡೆಸುವಂತೆ ಸಚಿವರು ನಿರ್ದೇಶಿಸಿದರು.ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣಗೊಂಡು ಪೂರ್ಣಗೊಂಡಿರುವ ಹಾಸ್ಟೆಲ್ ಕಟ್ಟಡಗಳನ್ನು ಉದ್ಘಾಟನೆಗೆ ಕಾಯದೆ ವಿದ್ಯಾರ್ಥಿಗಳಿಗೆ ಬಳಕೆಗೆ ನೀಡುವಂತೆ ಕೂಡ ಸೂಚಿಸಲಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಪೋಲಿಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





















