ಬೆಂಗಳೂರು: ಬಿಜೆಪಿ ಮೇಲೆ ಮುನಿಸಿಕೊಂಡು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ್ದ ಗಾಲಿ ಜನಾರ್ದನ ರೆಡ್ಡಿ ಅವರು ಕಮಲ ಪಾಳಯಕ್ಕೆ ಮರಳಿದ್ದಾರೆ.
ಫೆಬ್ರವರಿ 27ರಂದು ನಡೆದು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದ ಅವರು ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಬಲ ತುಂಬಿದ್ದಾರೆ. ಅವರ ಮರು ಸೇರ್ಪಡೆಯಿಂದ ಬಿಜೆಪಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಟಿ. ಜಾನ್ ಅವರ ಪುತ್ರ ಥಾಮಸ್ ಜಾನ್ ಅವರು ಪಕ್ಷ ಸೇರಿದರು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಹಿರಿಯ ನಾಯಕ ಸಿ.ಟಿ. ರವಿ, ಸಂಸದ ಪಿ.ಸಿ. ಮೋಹನ್, ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಸಂಸದ ದೇವೇಂದ್ರಪ್ಪ ಅವರು ಭಾಗಿಯಾಗಿದ್ದಾರೆ. ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಅಪಾರ ಬೆಂಬಲಿಗರು ಪಕ್ಷ ಸೇರಿದರು. ಬಿ.ವೈ ವಿಜಯೇಂದ್ರ ಹಾಗೂ ಯಡಿಯೂರಪ್ಪ. ಅವರು ನಾಯಕರು ಮತ್ತು ಹಿಂಬಾಲಕರನ್ನು ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಪಕ್ಷಕ್ಕೆ ಸ್ವಾಗತ ಮಾಡಿದರು.
ಮೋದಿ ಅವರ ನಾಯಕತ್ವ ಮೆಚ್ಚಿದ ರೆಡ್ಡಿ:
ಗಾಲಿ ಜನಾರ್ದನ ರೆಡ್ಡಿ ಅವರು ಮರಳಿ ಪಕ್ಷಕ್ಕೆ ಬಂದಿರುವುದು ಬಹಳ ಸಂತೋಷದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಗಾಲಿ ಜನಾರ್ದನ ರೆಡ್ಡಿ ಅವರು, ತಾವೇ ಕಟ್ಟಿದ ಪಕ್ಷವನ್ನು ವಿಸರ್ಜನೆ ಮಾಡಿ ಬಿಜೆಪಿಯೊಂದಿಗೆ ವಿಲೀನ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಶಕ್ತಿ ಬಂದಂತಾಗಿದೆ. ಮೋದಿ ಅವರ ನಾಯಕತ್ವ ಮೆಚ್ಚಿ ಮರು ಸೇರ್ಪಡೆ ಆಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.