ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಕಾಂಗ್ರೆಸ್ ಸೇರುವ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಡಿವಿಎಸ್ ಸೇರ್ಪಡೆಗೆ ಡಿಸಿಎಂ ಒಪ್ಪಿದರೂ, ಸಿಎಂ ಒಲ್ಲೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ತಮ್ಮನ್ನು ಸಂಪರ್ಕ ಮಾಡಿರುವುದು ನಿಜ ಎಂದಿರುವ ಡಿವಿಎಸ್ ಬಿಜೆಪಿಯ ಕೆಲವು ನಾಯಕರ ವಿರುದ್ಧ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ವಿಚಾರ ದಲ್ಲಿ ಸಿಎಂ ಡಿಸಿಎಂ ನಡುವೆ ಒಮ್ಮತ ಮೂಡಿಲ್ಲ.
ಮಂಗಳವಾರ ಹೊಸದಿಲ್ಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಲು ಡಿಸಿಎಂ ಉತ್ಸುಕರಾಗಿದ್ದರು. ಆದರೆ ಇದಕ್ಕೆ ಸಿಎಂ ತಣ್ಣೀರೆರಚಿದ್ದು, ಯಾವುದೇ ಕಾರಣಕ್ಕೂ ಪಕ್ಷಕ್ಕೆ ಕರೆತರುವುದು ಬೇಡ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಶೆಟ್ಟರ್ ಕಲಿಸಿದ ಪಾಠ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದರೆಂದು ಕಾಂಗ್ರೆಸ್‌ಗೆ ಕರೆತಂದದ್ದೂ ಅಲ್ಲದೆ, ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಕೂಡ ಕೊಡಲಾಗಿತ್ತು. ಆದರೆ ಕೊನೆಗೆ ಎಲ್ಲವನ್ನೂ ಬಿಟ್ಟು ಬಿಜೆಪಿಗೆ ಮರಳಿದರು. ಇದರಿಂದ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಮುಜುಗರ ಆಗಿದೆ. ಹಲವಾರು ವರ್ಷಗಳಿಂದ ಬಿಜೆಪಿಯಲ್ಲೇ ಇರುವ ಸದಾನಂದ ಗೌಡರನ್ನು ಕರೆತಂದರೆ ಮತ್ತೆ ಮುಜುಗರ ಅನುಭವಿಸಬೇಕಾಗುತ್ತದೆ. ಹೀಗಾಗಿ ಈ ದುಸ್ಸಾಹಸಕ್ಕೆ ಕೈಹಾಕುವುದು ಬೇಡ ಎಂಬ ನಿಲುವಿಗೆ ಸಿಎಂ ಬಂದಂತಿದೆ.