ಪುತ್ತೂರು: ಬುದ್ಧಿವಂತರ ಜಿಲ್ಲೆಯ ಜನರನ್ನು ದಡ್ಡರನ್ನಾಗಿಸುವ ಕೆಲಸ ನಡೆಯುತ್ತಿದೆ. ದೇಶಾಭಿಮಾನದ ಹೆಸರಿನಲ್ಲಿ ದ್ವೇಷಾಭಿಮಾನ ತುಂಬಿಸಲಾಗುತ್ತಿದೆ. ಇಂತಹಾ ಕಾಲಘಟ್ಟದಲ್ಲಿ ಅಂಬೇಡ್ಕರ್ ವಾದದ ಅನುಷ್ಠಾನವೇ ಎಲ್ಲಾ ಸವಾಲುಗಳಿಗೆ ಉತ್ತರವಾಗುತ್ತದೆ ಎಂದು ಹಿರಿಯ ಲೇಖಕ, ಪ್ರಾಧ್ಯಾಪಕ ಡಾ. ಪ್ರೊ. ಲಕ್ಷೀಪತಿ ಸಿ.ಜಿ. ಹೇಳಿದರು.
ಪುತ್ತೂರಿನ ಸುದಾನ ಎಡ್ವರ್ಡ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ “ಅಂಬೇಡ್ಕರ್ ವಾದದ ಆಚರಣೆ” ಪುಸ್ತಕ ಬಿಡುಗಡೆ ಸಮಾರಂಭ ಮತ್ತು ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಕಲಿ ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಹಾಗೂ ಸಂವಿಧಾನದ ಬಗ್ಗೆ ಅಭಿಮಾನ ದೂರಮಾಡುವ ಷಡ್ಯಂತ್ರದಲ್ಲಿ ಮನುವಾದಿಗಳು ತೊಡಗಿಕೊಂಡಿದ್ದು, ಈ ಕುರಿತಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ ಎಂದರು.
ಸಮಾಜವನ್ನು ಅರ್ಥಮಾಡಿಕೊಳ್ಳುವಂತಹಾ ಶಿಕ್ಷಣ ನಮಗೆ ಬೇಕು ಎಂದ ಅವರು, ವಿದ್ಯಾರ್ಥಿಗಳಲ್ಲಿ ಅಂಬೇಡ್ಕರ್ ವಾದದ ಆಶಯಗಳನ್ನು ಬಿತ್ತುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್ ಯಂ. ಮಾತನಾಡಿ, ಅಂಬೇಡ್ಕರ್ ವಿಚಾರ ಧಾರೆಗಳಿಗೆ ಪ್ರಾಮುಖ್ಯತೆ ನೀಡದೆ ಸಾಮಾಜಿಕ ಅಭಿವೃದ್ಧಿ ಅಸಾಧ್ಯ. ಆತ್ಮಾಭಿಮಾನ ಮತ್ತುಸ್ವಾಭಿಮಾನದ ಬದುಕಿಗಾಗಿ ಅಂಬೇಡ್ಕರ್’ರನ್ನು ಪ್ರತಿಯೊಬ್ವರು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಮಾತನಾಡಿ, ಅಂಬೇಡ್ಕರ್ ಅನುಯಾಯಿ ಎನ್ನಲು ಹಲವರಲ್ಲಿ ಹಿಂಜರಿಕೆ ಇದೆ. ಇದು ನಮ್ಮ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದರು. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪ್ರಶ್ಯತೆ, ಜಾತಿ ಪದ್ಧತಿ, ತಾರತಮ್ಯದ ಬಗ್ಗೆ ಹೋರಾಟ ತೀವ್ರವಾಗಬೇಕಿದ್ದರೆ, ನಮ್ಮ ಮನೆ ಮಕ್ಕಳಿಗೆ ಅಂಬೇಡ್ಕರ್ ವಾದವನ್ನು ತಿಳಿಸುವ ಕೆಲಸ ಆಗಬೇಕಿದೆ ಎಂದರು.
ವಿಠಲ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಕಿರಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಆಶಯಗಳನ್ನು ತಿಳಿಸುವ ಕಾರ್ಯಾಗಾರ ನಡೆಸುವ ಬಗ್ಗೆ ಪ್ರಸ್ತಾಪಿಸಿದರು.
ಬೌದ್ಧ ಮಹಾಸಭಾ ಪುತ್ತೂರು ಅಧ್ಯಕ್ಷ ಪ್ರೊ.ಗಣೇಶ್ ಕಾರೆಕ್ಕಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಪ್ರಾಸ್ತಾವಿಕವಾಗಿ ಮಾತನಾಡಿದರು
ವಿದ್ಯಾರ್ಥಿನಿಯರಾದ ರಕ್ಷಾ, ರಶ್ಮಿ, ಮೇಘನಾ ಅವರು ಡಾ. ಪ್ರೊ. ಲಕ್ಷೀಪತಿ ಸಿ.ಜಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಕೃತಿಯನ್ನು ಪರಿಚಯಿಸಿದರು. ಉಪನ್ಯಾಸಕ ಪ್ರೊ. ಭಾಸ್ಕರ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.