ಬಂಟ್ವಾಳ: ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ರಂಗಭೂಮಿ ಕಲಾವಿದ, ತುಳು ರಂಗಭೂಮಿಯ ಕಲಾವಿದ, ಚಿತ್ರನಟ ಚಿ.ರಮೇಶ್ ಕಲ್ಲಡ್ಕ (68) ಅವರು ಜು.23ರ ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕಳೆದ ಹಲವು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ಮಂಗಳೂರಿನ ಹೆಸರಾಂತ ನಾಟಕ ತಂಡ ಕಲಾಸಂಗಮದಲ್ಲಿ ಕಳೆದ 20 ವರ್ಷಗಳಿಂದ ಹತ್ತಾರು ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು.
ತುಳು ರಂಗಭೂಮಿಯಲ್ಲಿ ಹೊಸ ಇತಿಹಾಸ ಬರೆದ ಶಿವಧೂತೆ ಗುಳಿಗೆ ನಾಟಕದಲ್ಲಿ ಭೀಮಾರಾವ್ ಪಾತ್ರದಲ್ಲಿ ಮಿಂಚುತ್ತಿದ್ದರು. ಉಳಿದಂತೆ ಒರಿಯರ್ದೊರಿ ಅಸಲ್, ಮದಿಮೆ, ಕುಟುಂಬ, ಶಿವಾಜಿ ಮೊದಲಾದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕಲ್ಲಡ್ಕ ಶಾರದೋತ್ಸವ, ಸರಕಾರಿ ಶಾಲೆಯ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು.