ಪುತ್ತೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತಾರೆ ಎಂದು ಲೋಕಸೇವಾ ಸಹಾಯಹಸ್ತ ಟ್ರಸ್ಟ್ ನ ಉದನೇಶ್ವರ ಭಟ್ ಹೇಳಿದರು.
ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರಿಗೆ ಅವರ ಮನೆ ಆವರಣದಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಇನ್ನೊಬ್ಬರ ನೋವಿಗೆ ಮಿಡಿಯುವವನು, ಅದಕ್ಕೆ ಸ್ಪಂದನೆ ನೀಡುವವನು ಕ್ರಿಯಾಶೀಲನಾಗಿ ಇರುತ್ತಾನೆ. ಆದ್ದರಿಂದ ಆತ ಕೇವಲ ಜೀವ ಅಲ್ಲ, ಆತ ಸಜೀವ ಆಗಿರುತ್ತಾನೆ. ಹೀಗಿದ್ದ ವ್ಯಕ್ತಿ ಅಣ್ಣಪ್ಪ ಅವರು.
ಸದಾ ಸಮಾಜಮುಖಿ ಕೆಲಸ ಮಾಡುತ್ತಾ, ವಿವಿಧ ಸಂಘಗಳಲ್ಲಿ ತೊಡಗಿಸಿಕೊಂಡಿದ್ದರು. ಸದಾ ಕ್ರಿಯಾಶೀಲನಾಗಿ ಇದ್ದರು. ಅವರು ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದರು. ತನ್ನ ನೋವನ್ನು ಮರೆಮಾಡಿ, ಇನ್ನೊಬ್ಬರಿಗಾಗಿ ದುಡಿದಿದ್ದಾರೆ. ಕಲಾಸಿರಿ ಗೊಂಬೆ ಬಳಗದ ಮೂಲಕ, ಅನೇಕ ಸಂಘ ಸಂಸ್ಥೆಗಳ ಮೂಲಕ ಅನೇಕರಿಗೆ ಸಹಾಯಹಸ್ತ ಚಾಚಿ, ತನ್ನ ಜೀವವನ್ನೇ ಕೊಟ್ಟರು. ಅವರ ಆತ್ಮ ದೇಹವನ್ನು ಬಿಟ್ಟರು, ಅವರು ಸಜೀವವಾಗಿಯೇ ಇರುತ್ತಾರೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ಅಶಕ್ತರಿಗಾಗಿ ಬೊಂಬೆ ವೇಷ ಹಾಕಿ ಖ್ಯಾತಿ ಗಳಿಸಿದ್ದ ರವಿ ಕಟಪಾಡಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.
ಬಳಿಕ ಅಣ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಶ್ರದ್ದಾಂಜಲಿ ಸಭೆಗೆ ಆಗಮಿಸಿದವರಿಗೆ ಗಿಡ ವಿತರಿಸಲಾಯಿತು.
ಗಣೇಶ್ ನಡುವಾಲು ಕಾರ್ಯಕ್ರಮ ನಿರೂಪಿಸಿದರು.