ಪುತ್ತೂರು: ಪ್ರಸಕ್ತ ಸಮಾಜದಲ್ಲಿ ಬಾಧಿಸುತ್ತಿರುವ ಅತೀ ದೊಡ್ಡ ಸಮಸ್ಯೆಗಳಲ್ಲಿ ಡಯಾಬಿಟೀಸ್ ಒಂದು. ಇದರಲ್ಲಿ ಶೇ. 50ರಷ್ಟು ಡಯಾಬಿಟೀಸ್ ಅನ್ನು ತಡೆಗಟ್ಟಲು ಸಾಧ್ಯವೇ ಇಲ್ಲ. ಆದ್ದರಿಂದ ಉಚಿತ ಡಯಾಬಿಟೀಸ್ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ ಎಂದು ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪತಿ ರಾವ್ ಹೇಳಿದರು.
ಪುತ್ತೂರು ರೋಟರಿ ಕ್ಲಬ್ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಹಾಗೂ ಡಾ. ನಝೀರ್ಸ್ ಡಯಾಬಿಟೀಕ್ ಸೆಂಟರಿನಲ್ಲಿ ಬುಧವಾರ ನಡೆದ ಉಚಿತ ತಪಾಸಣೆ, ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಡಯಾಬಿಟೀಸ್ ಅನ್ನು ಪೂರ್ವಭಾವಿಯಾಗಿ ತಡೆಗಟ್ಟುವುದು ಅತೀ ಅಗತ್ಯ. ಡಯಾಬಿಟೀಸ್ ಬಾಧಿಸಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಗುಣ ಪಡಿಸುವುದು ಅಸಾಧ್ಯ. ಹತೋಟಿಯಲ್ಲಿಡುವ ಪ್ರಯತ್ನ ಮಾಡಬಹುದಷ್ಟೇ ಎಂದರು.
ಡಾ. ನಝೀರ್ ಅಹಮದ್ ಅವರು ಮಾತನಾಡಿ, ಸಂಸ್ಥೆ 12 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಆಪ್ತ ಸಮಾಲೋಚಕಿ ಹಾಗೂ ಮನಶಾಸ್ತ್ರ ತಜ್ಞೆ ಶ್ರದ್ಧಾ ಎಲ್. ರೈ ಅವರು ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ವೈಯಕ್ತಿಕ ಸಮಾಲೋಚನೆಯ ಮಹತ್ವ ವಿಷಯದಲ್ಲಿ ಮಾಹಿತಿ ನೀಡಿದರು.
ಇದೇ ಸಂದರ್ಭ ಥೈರಾಯ್ಡ್ ಗ್ರಂಥಿಯ ತಪಾಸಣೆ, ಶುಗರ್, HBA1C, ಕೊಲೆಸ್ಟ್ರಾಲ್, BMD (ಮೂಳೆ ಸಾಂಧ್ರತೆ)ಯ ಮಾಸಿಕ ತಪಾಸಣೆ ನಡೆಯಿತು.
ಪುತ್ತೂರು ರೋಟರಿ ಕ್ಲಬ್’ನ ಬಾಲಕೃಷ್ಣ ಆಚಾರ್, ಶ್ರೀಧರ್ ಕಣಜಾಲು, ರಫೀಕ್, ದತ್ತಾತ್ರೇಯ ರಾವ್, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಸುಬ್ರಮಣಿ ಪಿ.ವಿ. ಮೊದಲಾದವರು ಉಪಸ್ಥಿತರಿದ್ದರು.
ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ದಾಮೋದರ್ ವಂದಿಸಿದರು.