ಮೆಟ್ರೋ ರೈಲು ಯೋಜನೆ ಕೈಗೊಳ್ಳಲು ಮಾಸ್ಟರ್ ಪ್ಲಾನ್ ರಚಿಸಲು ಸರಕಾರ ಮುಂದಾಗಿದೆ.
ಮಂಗಳೂರು- ಉಡುಪಿ- ಮಣಿಪಾಲ ಇಂಟರ್ ಸಿಟಿ 64 ಕಿ.ಮೀ ಉದ್ದದ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ರಾಜ್ಯ ಸರಕಾರವು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಸಿಆರ್‌ಎಲ್)ಕ್ಕೆ ಸೂಚಿಸಿದೆ. ಈ ಕುರಿತು ಉಭಯ ಜಿಲ್ಲಾ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದೆ.
ಈ ಕುರಿತಂತೆ ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗ್ಡೆ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪತ್ರ ಬರೆದಿದ್ದು, ಮಂಗಳೂರು-ಮಣಿಪಾಲ ಮಧ್ಯೆ ಪ್ರಮುಖ ನಗರ, ಅರೆನಗರ ಹಾಗೂ ಕೈಗಾರಿಕಾ ವಲಯಗಳನ್ನು ಒಳಗೊಂಡಂತೆ ಮೆಟ್ರೋ ಮಾರ್ಗ ಅಭಿವೃದ್ಧಿ ಪಡಿಸಬಹುದು. ಇದರಿಂದ ಆರ್ಥಿಕ ಪ್ರಗತಿ, ನಗರಾಭಿವೃದ್ಧಿಯೊಂದಿಗೆ ಸಾರಿಗೆ ವ್ಯವಸ್ಥೆ ಸುಲಲಿತವಾಗಬಹುದು ಎಂದು ತಿಳಿಸಿದ್ದಾರೆ.
ಈಗಿರುವ ಸಾರಿಗೆ ವ್ಯವಸ್ಥೆ ದಟ್ಟಣೆಯಿಂದ ಕೂಡಿದೆ. ರಸ್ತೆ ಮಾರ್ಗವನ್ನೇ ಅವಲಂಬಿಸಿರುವುದು ಸಂಚಾರಕ್ಕೆ ಹೆಚ್ಚಿನ ಸಮಯ ತಗಲುತ್ತಿದೆ. ಜನಸಂಖ್ಯೆ ಹೆಚ್ಚಿರುವುದರಿಂದ ಮೆಟ್ರೋ ರೈಲು ವ್ಯವಸ್ಥೆ ತರಲು ಸೂಕ್ತ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಸರಕಾರವು ಉಡುಪಿ-ಮಂಗಳೂರು ಭಾಗದಲ್ಲಿ ಮೆಟ್ರೋ ಆರಂಭಿಸುವ ಬಗ್ಗೆ ಪತ್ರ ಬರೆದಿದೆ. ಬಿಎಂಸಿಆರ್‌ಎಲ್ ಅಧ್ಯಯನ ನಡೆಸಲಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು