ಅಂಚೆ ಜನ ಸಂಪರ್ಕ ಅಭಿಯಾನದಡಿ ಪುತ್ತೂರು ಅಂಚೆ ವಿಭಾಗದಿಂದ ಅನಾರೋಗ್ಯ ಪೀಡಿತ ಬಾಲಕಿಯ ಮನೆಗೆ ತೆರಳಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮಾಡಲಾಗಿದೆ. ಒಟ್ಟು 317 ಅಶಕ್ತರ ಮನೆ ಬಾಗಿಲಿಗೆ ಹೋಗಿ ಈ ಸೇವೆ ನೀಡಲಾಗಿದೆ. ಮರ್ಣೆ ಗ್ರಾಮದ ದಿನೇಶ್ ಹಾಗೂ ಉಷಾ ದಂಪತಿಯ 10 ವರ್ಷದ ಮಗಳು ಬೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಮನೆಗೆ ತೆರಳಿದ ತಂಡ ಆಧಾರ್ ಬಯೋಮೆಟ್ರಿಕ್ ನವೀಕರಣ ಹಾಗೂ ವಿಳಾಸ ತಿದ್ದುಪಡಿ ಮಾಡಿದೆ.ಈ ಜನೋಪಯೋಗಿ ಸೇವೆಗೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಫೋಸ್ಟ್ ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂಚೆ ಸಿಬ್ಬಂದಿಯ ಮಾದರಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದು, ಅಂಚೆ ಇಲಾಖೆಯ ಅತ್ಯುತ್ತಮ ಸೇವಾ ಯೋಜನೆಗಳು ಮತ್ತಷ್ಟು ಜನರಿಗೆ ತಲುಪವಂತಾಗಲಿ ಎಂದು ಶುಭ ಹಾರೈಸಿದ್ದಾರೆ.
ಕಾರ್ಕಳದ ದೊಂಬರಪಲ್ಕೆಯ 10 ವರ್ಷದ ಬಾಲಕಿ ಬೈನ್ ಟ್ಯೂಮರ್‌ನಿಂದ ಬಳಲುತ್ತಿದ್ದಳು. ಆಕೆಯ ತಾಯಿಯೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅವರು ತಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕಾಗಿತ್ತು ಹಾಗೂ ಅವರ ವಿಳಾಸವನ್ನು ಸರಿಪಡಿಸಬೇಕಾಗಿತ್ತು ಆದರೆ ಅವರ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ ಅಂಚೆ ಕಚೇರಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ.
ಹೀಗಾಗಿ ಕುಟುಂಬವು ಕಾರ್ಕಳ ಪ್ರಧಾನ ಅಂಚೆ ಕಚೇರಿಯನ್ನು ಸಂಪರ್ಕಿಸಿ, ಆಧಾರ್ ನವೀಕರಣಕ್ಕಾಗಿ ಮನೆಯ ಸಹಾಯವನ್ನು ಕೋರಿತ್ತು. ಬಳಿಕ ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ತಂಡವು ಯಂತ್ರಗಳೊಂದಿಗೆ ಕುಟುಂಬದ ಮನೆಗೆ ಹೋಗಿ ಅಗತ್ಯ ಬಯೋಮೆಟ್ರಿಕ್ ನವೀಕರಣಗಳು ಮತ್ತು ವಿಳಾಸ ಯಶಸ್ವಿಯಾಗಿ ಪೂರ್ಣಗೊಳಿಸಿತು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಂಚೆ ಅಧಿಕಾರಿಗಳ ಸೇವೆಯನ್ನು ಶ್ಲಾಘಿಸಿದ್ದಾರೆ.