ಬೆಂಗಳೂರು :ರಾಜ್ಯದ ಬಡ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಜಾರಿಗೆ ತಂದಿರುವ ಅನ್ನ ಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಬಜೆಟ್ ಮಂಡನೆ ವೇಳೆ ಈ ಮಾಹಿತಿಯನ್ನು ಪ್ರಕಟಿಸಿದರು.
ಇದುವರೆಗೆ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು, ಮುಂದಿನ ದಿನಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸಾಮಗ್ರಿಗಳನ್ನೊಳಗೊಂಡ ‘ಇಂದಿರಾ ಆಹಾರ ಕಿಟ್’ ಅನ್ನು ಫಲಾನುಭವಿಗಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ.ಈ ಆಹಾರ ಕಿಟ್‌ನಲ್ಲಿ ತೊಗರಿಬೇಳೆ, ಸಕ್ಕರೆ, ಉಪ್ಪು ಹಾಗೂ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳು ಇರಲಿವೆ. ಬಡ ಕುಟುಂಬಗಳ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಸುಮಾರು 4.54 ಕೋಟಿ ಜನರು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಗಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ.ಹೊಸ ಆಹಾರ ಕಿಟ್ ವಿತರಣೆಗಾಗಿ 2026–27ನೇ ಸಾಲಿನ ಬಜೆಟ್‌ನಲ್ಲಿ ಸುಮಾರು ₹6,200 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಸರ್ಕಾರ ತಿಳಿಸಿದೆ.























