ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಸಂಘರ್ಷದ ಪರಿಣಾಮವಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ನೂರಾರು ಭಾರತೀಯರು, ಅದರಲ್ಲೂ ಹಲವು ಕನ್ನಡಿಗರು, ಕೊನೆಗೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.ಮೂರು ದಿನಗಳ ಆತಂಕದ ಬಳಿಕ ಸೋಮವಾರ ರಾತ್ರಿ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮರಳಿದವರಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹಾಗೂ ಒಲಿಂಪಿಕ್ ಪದಕ ವಿಜೇತೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕೂಡ ಇದ್ದರು.
ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ದುಬೈ ಮಾರ್ಗವಾಗಿ ವಾಪಸ್ಸಾಗುತ್ತಿದ್ದ ಭೋಜೇಗೌಡರು, ವಿಮಾನ ರದ್ದಾದ ಕಾರಣ ವಿಮಾನ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದರು. “ಮೊದಲು ವಿಳಂಬ ಎಂದು ತಿಳಿಸಿದರು, ನಂತರ ವಿಮಾನವೇ ರದ್ದು ಎಂದು ಘೋಷಿಸಿದರು. ಯುದ್ಧದ ಭೀತಿ ಎಲ್ಲರ ಮುಖದಲ್ಲೂ ಕಾಣುತ್ತಿತ್ತು,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದ್ದು, ಸುರಕ್ಷಿತ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು.ಸುರಕ್ಷಿತವಾಗಿ ಮರಳಿದ ಪ್ರಯಾಣಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೃತಜ್ಞತೆ ಸಲ್ಲಿಸಿದರು.






















