ಪುತ್ತೂರು: ಗ್ರಾಮ ಪಂಚಾಯತ್ ಸದಸ್ಯರ ಪ್ರಯಾಣ ಭತ್ತೆ ಹಾಗೂ ದಿನಭತ್ತೆಯನ್ನು ಹೆಚ್ಚಿಸುವಂತೆ ಮತ್ತು ದೂರವಾಣಿ ಭತ್ತೆ ಪಾವತಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗೆ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಮನವಿ ಸಲ್ಲಿಸಿದರು.
ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006ರ ಪ್ರಕರಣ 61ರಂತೆ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಪ್ರಯಾಣ ಭತ್ತೆಯನ್ನು ಪಾವತಿಸಲು ಅವಕಾಶವಿದೆ. ಕರ್ನಾಟಕ ಪಂಚಾಯತ್ ರಾಜ್ ( ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರುಗಳ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ) ನಿಯಮಗಳು,1994ರ ಪ್ರಕರಣ 03ರಂತೆ ಬಸ್ಸುಗಳು ಅಥವಾ ಸಾರ್ವಜನಿಕ ವಾಹನಗಳ ಸಾರಿಗೆ ವ್ಯವಸ್ಥೆ ಇರದ ಸ್ಥಳಗಳಿಗೆ ರಸ್ತೆಯ ಮೂಲಕ ಪ್ರಯಾಣಕ್ಕೆ ಪ್ರತಿ ಕಿಲೋ ಮೀಟರಿಗೆ 40 ಪೈಸೆ ಪ್ರಯಾಣ ಭತ್ತೆ ಪಾವತಿಗೆ ಮತ್ತು ಪ್ರಕರಣ 09ರಂತೆ ಸದರಿ ಪ್ರಯಾಣ ಭತ್ತೆಯನ್ನು ಗ್ರಾಮ ಪಂಚಾಯತ್ ಕಚೇರಿಯಿಂದ 08 ಕಿಲೋ ಮೀಟರ್ ದೂರದೊಳಗಿನ ಸ್ಥಳಕ್ಕೆ ಪಾವತಿಸಲು ಅವಕಾಶ ಇರುವುದಿಲ್ಲ. ರಾಜ್ಯದೊಳಗೆ ತಂಗುವಿಕೆಗಳಿಗೆ ಬೆಂಗಳೂರಿನಲ್ಲಿ ಪ್ರತಿ ದಿವಸಕ್ಕೆ 35 ರೂಪಾಯಿ ಹಾಗೂ ಇತರ ಸ್ಥಳಗಳಲ್ಲಿ ತಂಗಲು ಪ್ರತಿ ದಿವಸಕ್ಕೆ 25 ರೂಪಾಯಿ ದಿನಭತ್ತೆ ಪಾವತಿಸಲು ಅವಕಾಶವಿದೆ. ಸದರಿ ನಿಯಮಗಳನ್ನು ಸುಮಾರು 31 ವರ್ಷಗಳ ಹಿಂದೆ ರೂಪಿಸಲಾಗಿದ್ದು ಸದರಿ ದರಗಳು ಇವತ್ತಿನ ದಿನಕ್ಕೆ ಪ್ರಸ್ತುತವಾಗಿಲ್ಲ. ಆದ್ದರಿಂದ ಸದರಿ ನಿಯಮಗಳಿಗೆ ಕೂಡಲೇ ತಿದ್ದುಪಡಿ ಮಾಡಿ ಸದರಿ ಪ್ರಯಾಣ ಭತ್ತೆಯನ್ನು ಪ್ರತಿ ಕಿಲೋ ಮೀಟರಿಗೆ ಕನಿಷ್ಟ 15 ರೂಪಾಯಿ ಹಾಗೂ ದಿನಭತ್ತೆಯನ್ನು ಕನಿಷ್ಟ 1000 ರೂಪಾಯಿಗೆ ಹೆಚ್ಚಿಸಿ, ಮತ್ತು ಸಾರ್ವಜನಿಕರ ತ್ವರಿತ ಸಂಪರ್ಕ ಮತ್ತು ಮೊಬೈಲ್ ನಲ್ಲಿ ಇಂಟರ್ನೆಟ್ ಡಾಟಾ ಉಪಯೋಗಿಸಲು ತಿಂಗಳಿಗೆ ಕನಿಷ್ಟ ರೂಪಾಯಿ 1000/- ದೂರವಾಣಿ ಭತ್ತೆಯನ್ನು ಸದರಿ ಜನಪ್ರತಿನಿಧಿಗಳಿಗೆ ಪಾವತಿಸಲು ಕ್ರಮ ವಹಿಸುವಂತೆ ಕರ್ನಾಟಕ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲಾ IAS ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಮನವಿಗೆ ಪೂರಕವಾಗಿ ಸ್ಪಂದಿಸಿದ ಕಾರ್ಯದರ್ಶಿಗಳು, ಈ ವಿಷಯವನ್ನು ಸಚಿವರಲ್ಲಿ ಪ್ರಸ್ತಾಪಿಸಿ ಮುಂದಿನ ಕ್ರಮ ಕೈ ಗೊಳ್ಳುವ ಬಗ್ಗೆ ಭರವಸೆ ನೀಡಿದರು.


























