ಸಾಕು ನಾಯಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಉಡುಪಿ ನಗರಸಭೆ ನೀಡಿದೆ.
ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ಹಾಕುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳಿಗೆ ಅನಧಿಕೃತವಾಗಿ ರಸ್ತೆಯ ಚರಂಡಿಗಳ ಮೇಲೆ, ಶಾಲಾ ವಠಾರದಲ್ಲಿ, ಜನನಿಬಿಡ ಪ್ರದೇಶಗಳಲ್ಲಿ, ಬಸ್ ನಿಲ್ದಾಣ ಸೇರಿದಂತೆ ಇತರೆ ಸ್ಥಳಗಳಲ್ಲಿ ಸಾರ್ವಜನಿಕರು ಆಹಾರ ನೀಡಬಾರದು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ನಗರಸಭೆಯಿಂದ ಪ್ರಾಥಮಿಕ ಹಂತದಲ್ಲಿ ಬೀಡಿನಗುಡ್ಡೆ ಹಿಂದೂ ರುದ್ರ ಭೂಮಿ ಎದುರುಗಡೆ, ಆದಿ ಉಡುಪಿ ಮಾರುಕಟ್ಟೆ ಹಿಂಬದಿ, ಇಂದ್ರಾಳಿ ಹಿಂದೂ ರುದ್ರಭೂಮಿ ಎದುರುಗಡೆ, ಪರ್ಕಳ ಸ್ವಾಗತ ಗೋಪುರದ ಹತ್ತಿರ, ನಿಟ್ಟೂರು ಕೊಳಚೆ ನೀರು ಶುದ್ದೀಕರಣ ಘಟಕದ ಎದುರುಗಡೆ, ಪೆರಂಪಳ್ಳಿ ಮುಖ್ಯರಸ್ತೆಯ ಭಾರತೀಯ ವಿಕಾಸ ಟ್ರಸ್ಟ್ ಕೆಳಗಡೆ, ರಾಜ್ ಫಿಶ್ ಮಿಲ್ ಹತ್ತಿರ, ಆದಿಉಡುಪಿ ಮಲ್ಪೆ ರಸ್ತೆಯ ಹೆಲಿಪ್ಯಾಡ್ ಹತ್ತಿರ, ಕಕ್ಕುಂಜೆ ನಾರಾಯಣನಗರಕ್ಕೆ ಹೋಗುವ ರಸ್ತೆಯ ತಿರುವು ಬಳಿ ಹಾಗೂ ಬೈಲೂರು ಹನುಮಾನ್ ಗ್ಯಾರೇಜ್ ಡಯಾನ ರಸ್ತೆ ಜಯವೀರ ಸಂಘದ ಹತ್ತಿರ ನಿಯಮಾನುಸಾರ ಷರತ್ತು ವಿಧಿಸಿ, ಬೀದಿ ನಾಯಿಗಳಿಗೆ ಆಹಾರ ಹಾಕಲು ಅನುಮತಿಯನ್ನು ನೀಡಲು ಸ್ಥಳಗಳನ್ನು ಗುರುತಿಸಲಾಗಿದೆ.


























