ಬೆಂಗಳೂರು ಅ 28: ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಪ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ಸನ್ಮತ್ರ ಕಾರ್ಯಯೋಜನೆ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ಯುವ ಶಕ್ತಿ, ವಿದ್ಯಾರ್ಥಿ ಯುವಜನರ ಚೈತನ್ಯ ಮತ್ತು ಸಾಮರ್ಥ್ಯ ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಕಟಿಬದ್ದ ನಿಲುವು ತಳೆಯಬೇಕು ಎಂದರು.
ಮಂಗಳೂರು ಹತೋಟಿಗೆ ಬಂದಿದ್ದು ನಮ್ಮ ಅಧಿಕಾರಿಗಳಿಂದಲೇ: ಸಿಎಂ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆ, ಅನೈತಿಕ ಪೊಲೀಸ್ ಗಿರಿ ಹೆಚ್ಚಾಗಿತ್ತು. ಹಿಂದಿದ್ದ ಅಧಿಕಾರಿಗಳು ನಿಯಂತ್ರಣ ಮಾಡಲಿಲ್ಲ. ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆ ನಿಯಂತ್ರಣದಲ್ಲಿದೆ. ಈ ಸಾಧನೆ ಮಾಡಿದ್ದೂ ನಮ್ಮದೇ ಅಧಿಕಾರಿಗಳು ಮತ್ತು ಸಿಬ್ಬಂದಿ. ಇವರೇನು ಬೇರೆ ಗ್ರಹದಿಂದ ಬಂದವರಲ್ಲ. ನಿಮ್ಮವರೇ, ನಮ್ಮವರೇ ಆಗಿದ್ದಾರೆ. ಆದ್ದರಿಂದ ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಸಾಧಿಸಿ ತೋರಿಸಿ ಎಂದು ಕರೆ ನೀಡಿದರು.
ಇಂದು ನಾನೇ ಬಿಡುಗಡೆ ಮಾಡಿದ ಪೀಕ್ ಕ್ಯಾಪ್ ಮಾದರಿಯನ್ನೂ ಆಯ್ಕೆ ಮಾಡಿದ್ದು ನಾನೇ. 1956 ರಿಂದ ಸುಮಾರು 70 ವರ್ಷಗಳಿಂದ ಇದ್ದ ಒಂದೇ ಮಾದರಿಯ ಕ್ಯಾಪ್ ಅನ್ನು ಇಂದು ಬದಲಾಯಿಸಿದ್ದೇವೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿ ಕ್ಯಾಪ್ ಒದಗಿಸಲಾಗಿದ್ದು ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿ ಎಂದು ಕರೆ ನೀಡಿದರು.
ಕೇವಲ ಕ್ಯಾಪ್ ಬದಲಾಗುವುದಲ್ಲ. ನಿಮ್ಮ ಕಾರ್ಯಕ್ಷಮತೆಯೂ ಬದಲಾಗಲಿ ಎಂದು ಕರೆ ನೀಡಿದರು.
























