ಚಾಮರಾಜನಗರ: ರಾಜ್ಯದ ಶಿಕ್ಷಣ ಸಚಿವ ಮದುಬಂಗಾರಪ್ಪ ರವರು (Madhu Bangarappa) ಚಾಮರಾಜನಗರಕ್ಕೆ ಭೇಟಿ ನೀಡಿ ರಾಜ್ಯಕ್ಕೆ ಹೊಸ ಘೋಷಣೆಗಳನ್ನು ಮಾಡಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಹೊಸ 18,500 ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.
ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಧುಬಂಗಾರಪ್ಪ ಅವರು ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 46,000 ಶಾಲೆಗಳಿದ್ದು, ವರ್ಷಗಳಿಂದ ಸಮಸ್ಯೆಗಳು ಮುಂದುವರಿದಿವೆ. ಆದರೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಹಲವು ಕ್ರಮಗಳನ್ನು ವೇಗವಾಗಿ ಕೈಗೊಂಡಿದೆ. ಈಗಾಗಲೇ ವಿವೇಕ ಯೋಜನೆ ಅಡಿಯಲ್ಲಿ 8,200 ಕೊಠಡಿಗಳು ಪೂರ್ಣಗೊಂಡಿವೆ. ಶೀಘ್ರದಲ್ಲೇ 3,000 ಹೊಸ ಕೊಠಡಿಗಳ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹಿಂದಿನ ಸರ್ಕಾರ ಸಾಲ ಮಾಡಿ ಹೋಗಿದೆ. ಆ ಸಾಲವನ್ನು ಈಗಿನ ಸರ್ಕಾರ ತೀರಿಸಿದೆ. 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುವ ಉದ್ದೇಶ ಸರ್ಕಾರದ ಮುಂದಿದೆ ಎಂದರು.
18,500 ಶಿಕ್ಷಕರ ನೇಮಕಾತಿ
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ 13,500 ಶಿಕ್ಷಕರ ನೇಮಕಾತಿ ಮಾಡಿದೆ. ಆದರೆ ಬಿಜೆಪಿ ಸರ್ಕಾರ 5,428 ಶಿಕ್ಷಕರ ನೇಮಕ ಮಾಡಿಕೊಂಡಿತ್ತು. ನಮ್ಮ ಸರ್ಕಾರವು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಬದ್ಧವಾಗಿದೆ. ಶೀಘ್ರದಲ್ಲೇ ಇನ್ನೂ 18,500 ಹೆಚ್ಚಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದಿದ್ದಾರೆ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.