ಬೆಂಗಳೂರು: ಮಂಗಳವಾರ ನಾಳೆ (ಆ.5) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರುತ್ತಿರುವುದರಿಂದ ಸಾರಿಗೆ ನೌಕರರು ಮುಷ್ಕರ ಮಾಡುತ್ತಿಲ್ಲ. ಬದಲಿಗೆ ಬಸ್ ಸಂಚಾರ ಸ್ಥಗಿತಗೊಳಿಸಿ ಎಲ್ಲ ಸಿಬ್ಬಂದಿ ಮನೆಯಲ್ಲಿರುತ್ತಾರೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಸರ್ಕಾರ 38 ತಿಂಗಳ ಅರಿಯರ್ಸ್ ಕೊಡಬೇಕು. ಶಕ್ತಿ ಯೋಜನೆಯನ್ನು ನಾವು ಯಶಸ್ವಿಯಾಗಿ ನಿರ್ವಹಿಸ್ತಿದ್ದೇವೆ. ನಮ್ಮ ಸಿಬ್ಬಂದಿಗೆ ಒಂದು ಕೃತಜ್ಞತೆಯನ್ನು ಹೇಳಿದ್ರಾ ನೀವು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ನಮ್ಮ ಇಲಾಖೆಯಲ್ಲಿ ಒಂದೇ ಒಂದು ರೂ. ಹಗರಣ ಆಗಿಲ್ಲ. ಸಾರಿಗೆ ಸಿಬ್ಬಂದಿಗೆ ಸಿದ್ದರಾಮಯ್ಯ ಸರ್ಕಾರ ವಿಶ್ವಾಸದ್ರೋಹ ಮಾಡಿದೆ ಎಂಬ ಭಾವನ ಬಂದಿದೆ. ಮುಷ್ಕರ ತಪ್ಪಿಸುವ ಅವಕಾಶ ಇದೆ. ಪೊಲೀಸ್ ಅಧಿಕಾರಿಗಳು ನಮ್ಮನ್ನು ಈಗಾಗಲೇ ಕರೆಯುತ್ತಿದ್ದಾರೆ. ನಮ್ಮನ್ನು ಅರೆಸ್ಟ್ ಮಾಡಿ ಪಾಕಿಸ್ತಾನ ಜೈಲಿಗೆ ಹಾಕುತ್ತೀರಾ? ನಮ್ಮನ್ನು ಕರೆದು ಸಮಪರ್ಕವಾಗಿ ಮಾತಾಡಿ. ಬೇರೆ ಯಾರದ್ದೋ ಮಾತು ಕೇಳಿ ಹಾಳಾಗಬೇಡಿ ಎಂದು ಹೇಳದರು.
ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯರ ಕಿವಿ ಹಿಂಡಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿ. ಆ.5ರಂದು ನಾವು ಯಾವುದೇ ರೀತಿಯ ರ್ಯಾಲಿ ಮಾಡುವುದಿಲ್ಲ. ಸಿಎಂ ಸಿದ್ದರಾಮಯ್ಯನವರೇ ನಮಗೆ ದ್ರೋಹ ಮಾಡಬೇಡಿ. ಮರ್ಯಾದೆಯಾಗಿ ಸಾರಿಗೆ ಸಿಬ್ಬಂದಿ ಬೇಡಿಕೆಗಳನ್ನ ಈಡೇರಿಸಿ ಎಂದು ಎಚ್ಚರಿಕೆ ನೀಡಿದರು.
ಸಿಎಂ ಸೋಮವಾರ(ಆ.4) ಸಭೆ ಕರೆದಿದ್ದಾರೆ. ಹೋಗುತ್ತೇವೆ. ಕೊನೆ ಘಳಿಗೆಯಲ್ಲಿ ಸಭೆ ಕರೆಯಬೇಡಿ ಎಂದು ಮನವಿ ಮಾಡಿದ್ದೇವೆ. ಆದರೂ ಕೊನೆಯ ಘಳಿಗೆಯಲ್ಲೇ ಸಭೆ ಕರೆದಿದ್ದಾರೆ. ಎಸ್ಮಾ ಜಾರಿ ಮಾಡುತ್ತೇವೆ ಎಂಬುದು, ಮುಷ್ಕರ ಮಾಡಿದ್ರೆ ಸಂಬಳ ನೀಡುವುದಿಲ್ಲ ಎನ್ನುವುದು ಸರಿಯಲ್ಲ. ಏನಾದರೂ ಹಿಂದಿನ ಆದೇಶದಲ್ಲಿ ತಪ್ಪಾಗಿದ್ದರೆ ಅದನ್ನು ಬದಲಾವಣೆ ಮಾಡಿ. ನಮ್ಮ ಬೇಡಿಕೆಗಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಬೇಡಿ. ನಾಳೆಯ ಸಭೆಯಲ್ಲಿ ಹಳೆಯ ಹಾಡನ್ನೇ ಹಾಡಿದ್ರೆ, ಬಿಜೆಪಿ ಸರ್ಕಾರ ನೀಡಬೇಕಿರೋದು ಎನ್ನಬೇಡಿ ಎಂದು ಹೇಳಿದರು.