ಬೆಂಗಳೂರು: ಇಲಾಖೆಗಳಿಗೆ ನಿಗದಿಪಡಿಸಿರುವ ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು. ನಿಮಗೆ ಬೇಕಾದ ಅಗತ್ಯ ಸೌಕರ್ಯ ಒದಗಿಸಲಾಗುವುದು. ಆದರೆ, ತೆರಿಗೆ ಸಂಗ್ರಹ ವಿಷಯದಲ್ಲಿ ರಾಜಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್ಥಿಕ ಇಲಾಖೆ ಖರೀದಿಸಿರುವ ಹೊಸ ವಾಹನಗಳಿಗೆ ಚಾಲನೆ ಮತ್ತು ಅನುಕಂಪ ಆಧಾರಿತ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ ಸೇರಿ ಹಲವು ಇಲಾಖೆಗಳು ನಿಗದಿಪಡಿಸಿದ ತೆರಿಗೆ ಸಂಗ್ರಹ ಗುರಿ ಮುಟ್ಟಲೇಬೇಕು. ಯಾವುದೇ ನೆಪ ಹೇಳಬಾರದು. ತೆರಿಗೆ ಸಂಗ್ರಹದಲ್ಲಿ ಒಂದೇ ಒಂದು ರುಪಾಯಿ ಕಡಿಮೆ ಆಗಬಾರದು. ತೆರಿಗೆ ತಪ್ಪಿಸುವವರನ್ನು ಪತ್ತೆ ಹಚ್ಚಿ ವಸೂಲಿ ಮಾಡಿ. ನಿಮಗೆ ಬೇಕಾದ ಅಗತ್ಯ ಸಿಬ್ಬಂದಿ, ವಾಹನ ಮತ್ತಿತರ ಸೌಕರ್ಯ ಒದಗಿಸಲಾಗುವುದು. ತೆರಿಗೆ ಸಂಗ್ರಹ ವಿಷಯದಲ್ಲಿ ಮಾತ್ರ ರಾಜಿ ಆಗುವುದಿಲ್ಲ ಎಂದು ಸೂಚನೆ ನೀಡಿದರು.