ಬೆಂಗಳೂರು: ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಗೆ ಮೊದಲೇ ಕರ್ನಾಟಕ ವಿದ್ಯುದ್ಭಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ರಾಜ್ಯದ ಗ್ರಾಹಕರಿಗೆ “ವಿದ್ಯುದಾಘಾತ’ ನೀಡಿದೆ.
ಕೆಪಿಟಿಸಿಎಲ್ ನೌಕರರ ಪಿಂಚಣಿ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಸಂಬಂಧ ಕೆಇಆರ್‌ಸಿ ಮಾ. 18ರಂದು ಆದೇಶ ಹೊರಡಿಸಿದೆ. ಅದರಂತೆ ಮುಂದಿನ 3 ವರ್ಷಗಳಲ್ಲಿ ಗ್ರಾಹಕರಿಂದ ಪ್ರತೀ ಯೂನಿಟ್‌ಗೆ ಗರಿಷ್ಠ 39 ಪೈಸೆಯಿಂದ ಕನಿಷ್ಠ 35 ಪೈಸೆಯನ್ನು ವಸೂಲು ಮಾಡಲಿದೆ. ಇದರ ಬೆನ್ನಲ್ಲೇ ಎ. 1ರಿಂದ ಎಂದಿನಂತೆ ವಾರ್ಷಿಕ “ವಿದ್ಯುತ್ ದರ ಪರಿಷ್ಕರಣೆ ಬರೆ’ಯೂ ಬೀಳಲಿದೆ.
ಆದೇಶದಂತೆ 2021ರಿಂದ 2024ರ ವರೆಗಿನ ಪಿಂಚಣಿ ಮತ್ತು ಗ್ರಾಚುಯಿಟಿ ಹಿಂಬಾಕಿ ಒಟ್ಟು 4,659 ಕೋಟಿ ರೂ. ಇದೆ. ಒಟ್ಟು ಆರು ಕಂತುಗಳಲ್ಲಿ ಗ್ರಾಹಕರಿಂದಲೇ ಸಂಗ್ರಹಿಸಿ, ಕೆಪಿಟಿಸಿಎಲ್ ನೌಕರರಿಗೆ ನೀಡಲು ಉದ್ದೇಶಿಸಲಾಗಿದೆ.
ಮೊದಲ ವರ್ಷದಲ್ಲಿ ಸಂಗ್ರಹಿಸಬೇಕಾದ 2,812.23 ಕೋ.ರೂ.ಗಳನ್ನು 2025-26ರಲ್ಲಿ ಗ್ರಾಹಕರಿಂದ ಪ್ರತೀ ಯೂನಿಟ್‌ಗೆ 36 ಪೈಸೆಯಂತೆ ಸಂಗ್ರಹಿಸಲಾಗುತ್ತದೆ. ಅನಂತರದ ವರ್ಷ 2026-27ರಲ್ಲಿ 2,845.75 ಕೋ.ರೂ.ಗಳನ್ನು ಪ್ರತೀ ಯೂನಿಟ್‌ಗೆ 35 ಪೈಸೆಯಂತೆ 2027-2800 2,860.97 .. ಪ್ರತೀ ಯೂನಿಟ್‌ಗೆ 39 ಪೈಸೆಯಂತೆ ಗ್ರಾಹಕರಿಂದ ಪಡೆಯಲಾಗುತ್ತದೆ. ಬರುವ ಎ. 1ರಿಂದಲೇ ಇದು ಅನ್ವಯ ಆಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದಲ್ಲದೆ ಈ ಮೊದಲೇ ಎಸ್ಕಾಂಗಳು ನೀಡಿದ ಪ್ರಸ್ತಾವನೆ ಹಾಗೂ ಸಾರ್ವಜನಿಕ ಅಹವಾಲುಗಳ ಮೇರೆಗೆ ಎ. 1ರಿಂದ ದರ ಪರಿಷ್ಕರಣೆ ಆಗಲಿದೆ. ಈ ಹೊರೆಯೂ ಪ್ರತ್ಯೇಕವಾಗಿ ಗ್ರಾಹಕರ ಮೇಲೆ ಬೀಳಲಿದೆ. ಆದರೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ಮತ್ತು ರೈತರಿಗೆ ಉಚಿತ ವಿದ್ಯುತ್ ನೀಡುವುದರಿಂದ ಆ ಹೊರೆಯನ್ನು ಸರಕಾರವೇ ಭರಿಸಲಿದೆ.
ಹಿನ್ನೆಲೆ ಏನು?
ರಾಜ್ಯ ಸರಕಾರವು ಕೆಇಬಿ (ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ)ಯನ್ನು ರದ್ದುಪಡಿಸಿ, ಕೆಪಿಟಿಸಿಎಲ್ ಹಾಗೂ 5 ಎಸ್ಕಾಂಗಳನ್ನು ರಚಿಸಿತು. ಆಗ ನೌಕರರ ಪಿಂಚಣಿ ಮತ್ತು ಗ್ರಾಚುಯಿಟಿಯನ್ನು ತಾನೇ ಭರಿಸುವುದಾಗಿ ಒಪ್ಪಿಕೊಂಡಿತ್ತು. ಅನಂತರ 2021ರಿಂದ ಅದನ್ನು ಭರಿಸಲು ಒಪ್ಪಲಿಲ್ಲ. ಈ ಹಣವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಸರಕಾರ ಸೂಚಿಸಿತು. ಆದರೆ ಇದೇ ವಿಷಯ ಕೆಇಆರ್‌ಸಿ ಮುಂದೆ 2023ರಲ್ಲಿ ಬಂದಾಗ ಆಯೋಗವು ಒಪ್ಪಲಿಲ್ಲ. 2024ರ ಮಾ. 25ರಂದು ಪ್ರಕರಣ ಹೈಕೋರ್ಟ್ ಮುಂದೆ ಬಂದಾಗ ಪಿಂಚಣಿಯನ್ನು ಗ್ರಾಹಕರಿಗೆ ವರ್ಗಾಯಿಸುವುದಕ್ಕೆ ತಡೆ ನೀಡಲು ನ್ಯಾಯಾಲಯ ಒಪ್ಪಲಿಲ್ಲ. ಹೀಗಾಗಿ ಈಗ ಹೈಕೋರ್ಟ್ ಆದೇಶದಂತೆ ಕೆಇಆರ್‌ಸಿ ಜನರ ಮೇಲೆ ಹೆಚ್ಚಿನ ಹೊರೆ ಹಾಕಲು ತೀರ್ಮಾನಿಸಿದೆ. ಅದಕ್ಕಾಗಿ ಪ್ರತ್ಯೇಕ ಆದೇಶ ಹೊರಡಿಸಿದೆ.
ಪಿಂಚಿಣಿ ಹೊರೆ
ವರ್ಷ ಗ್ರಾಹಕರಿಂದ ಸಂಗ್ರಹಿಸಬೇಕಾದ ಪಿಂಚಣಿ ಬಾಕಿ (ಕೋಟಿ ರೂ.ಗಳಲ್ಲಿ) ಪ್ರತೀ ಯೂನಿಟ್‌ಗೆ ಸಂಗ್ರಹ
(ಪೈಸೆಗಳಲ್ಲಿ)
2025-26 2,812.23 36
2026-27 2,845.75 35
2027-28 2,860.97 39
ಅಂದಾಜು ಎಷ್ಟು ಹೆಚ್ಚಳ?
ಕೆಪಿಟಿಸಿಎಲ್ ನೌಕರರ ಪಿಂಚಣಿಗಾಗಿ ಈಗ ಪ್ರತೀ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಲಿದೆ. ಅಂದರೆ 100 ಯೂನಿಟ್‌ಗೆ 36 ರೂ. ಆಗಲಿದೆ. ಹಾಗಾಗಿ ತಿಂಗಳಿಗೆ 250 ಯೂನಿಟ್ ಬಳಸಿದರೆ ಒಟ್ಟು 90 ರೂ. ಹೆಚ್ಚಳವಾಗಲಿದೆ. ಇದರ ಜತೆಗೆ ಸಾಮಾನ್ಯ ದರ ಏರಿಕೆಯೂ ಸೇರಿದರೆ ಇನ್ನೂ ಹೆಚ್ಚಾಗಬಹುದು.
ಯೂನಿಟ್‌ಗೆ 36 ಪೈಸೆ ಏರಿಕೆ ಆಗಿರುವುದು ವಿದ್ಯುತ್ ದರ ಏರಿಕೆ ಅಲ್ಲ. ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬಂದಿಯ ಪಿಂಚಿಣಿ, ಗ್ರಾಚುಯಿಟಿ ಹಣದ ಪಾಲನ್ನು ಗ್ರಾಹಕರಿಂದ ಪಡೆಯಬಹುದು ಎಂಬ ಹೈಕೋರ್ಟ್ ಆದೇಶದ ಮೇರೆಗೆ ಕೆಇ ಆ ರ್‌ಸಿ ಈ ಆದೇಶ ಹೊರಡಿಸಿದೆ.
-ಕೆ.ಜೆ. ಜಾರ್ಜ್, ಇಂಧನ ಸಚಿವ