Friday, November 22
Share News

ಪುತ್ತೂರು; ಕಳೆದ 25 ವರ್ಷಗಳಿಂದ ರೈತರು ನನ್ನನ್ನು ಬೆಳೆಸಿದ್ದಾರೆ. ಅವರಿಗೆ ಕೃತಜ್ಞತೆ ಅರ್ಪಿಸುವ ಕೆಲಸವನ್ನು ರಜತ ಸಂಭ್ರಮದ ಮೂಲಕ ನಡೆಸಲಾಗುವುದು. ಸಂಸ್ಥೆಯ ರಜತ ಸಂಭ್ರಮದ ಅಂಗವಾಗಿ ಹತ್ತು ಹಲವು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾಕಾರ್ಯಗಳನ್ನು ಮಾಡಲಾಗಿದೆ ಎಂದು ಎಸ್‌ಆರ್‌ಕೆ ಲ್ಯಾಡರ‍್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕೇಶವ ಅಮೈ ತಿಳಿಸಿದರು.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಸಂಸ್ಥೆಯ 25 ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನಲೆಯಲ್ಲಿ ಸರಣಿ ಕಾರ್ಯಕ್ರಮಗಳಾಗಿ ರಕ್ತದಾನ ಶಿಬಿರ, ವಿಶೇಷ ಚೇತನ ಮಕ್ಕಳಿಗೆ ಕೊಡುಗೆ ಮತ್ತು ಗೌರವ ಸನ್ಮಾನ, ಬನ್ನೂರು ಶಾಲಾ ಕಟ್ಟಡದ ಕೊಠಡಿ ದುರಸ್ಥಿ, ಡಾ.ಶಿವರಾಮ ಕಾರಂತ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆರೋಗ್ಯ ಮತ್ತು ಸೈಬರ್ ಕ್ರೈಂ ಮಾಹಿತಿ ಶಿಬಿರ, ಪುತ್ತೂರು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಣೆ, ಎಸ್ ಆರ್ ಕೆ ಸಂಸ್ಥೆಯ ಸಿಬಂದಿಗಳಿಗೆ ಕ್ರೀಡಾಕೂಟ, ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಕಾರ್ಮಿಕರಿಗೆ ಸನ್ಮಾನ, ಕೃಷಿ ವಿಚಾರ ಸಂಕಿರಣ, ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಸನ್ಮಾನ ನಡೆಸಲಾಗಿದೆ ಎಂದು ವಿವರಿಸಿದರು.

ಮೇ. 25ರಂದು ರಾಮಕುಂಜ ಗ್ರಾಮದ ಕೊಯಿಲ ಕಲಾಯಿತೊಟ್ಟು ಎಂಬಲ್ಲಿ ರಜತ ಸಂಭ್ರಮದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ತುಳು ಚಲನಚಿತ್ರ ನಟ ಅರವಿಂದ ಬೋಳಾರ್ ಉಪಸ್ಥಿತಿಯಲ್ಲಿ ಸಾಧಕರಾದ ಬೆಟ್ಟ ಮರಿಯಪ್ಪ ಭಟ್, ರಾಮಣ್ಣ ಗೌಡ ತೆಂಕಿಲ, ಅನಂತ ನಾರಾಯಣ ಬಿ ಮತ್ತು ರಾಮಕೃಷ್ಣ ಭಟ್ ಕರುಂಬುಡೇಲು ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ಪುತ್ತೂರಿನ ಮುಕ್ರಂಪಾಡಿಯಲ್ಲಿ 1997ರಲ್ಲಿ ಕೃಷಿ ಪೂರಕ ಚಿಂತನೆಯೊಂದಿಗೆ ಆರಂಭಗೊಂಡ ಎಸ್ ಆರ್ ಕೆ ಎಂಬ ಸಂಸ್ಥೆ ಇದೀಗ ಸಾವಿರಕ್ಕೂ ಹೆಚ್ಚು ಮಂದಿಯ ಅನ್ನದಾತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸುಮಾರು 60ಕ್ಕೂ ಹೆಚ್ಚು ಕಾರ್ಮಿಕರು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಮಾರಾಟ, ಏಜೆನ್ಸಿ, ಸಹಿತ 1 ಸಾವಿರದಷ್ಟು ಮಂದಿ ಈ ಯಂತ್ರೋಪಕರಣಗಳ ಭಾಂದವ್ಯದೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಪುತ್ತೂರಿಗೆ ಮಾತ್ರ ಸೀಮಿತವಾಗಿದ್ದ ಈ ಸಂಸ್ಥೆ ಈಗ ರಾಜ್ಯದ 13 ಜಿಲ್ಲೆಗಳು, ಆಂದ್ರಪ್ರದೇಶ, ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಿಗೂ ತನ್ನ ವ್ಯಾಪ್ತಿಯನ್ನು ವೃದ್ಧಿಸಿಕೊಂಡಿದೆ ಎಂದವರು ಮಾಹಿತಿ ನೀಡಿದರು.

ಸುದ್ಧಿಗೋಷ್ಟಿಯಲ್ಲಿ ರಜತ ಸಂಭ್ರಮ ಸಮಿತಿಯ ಸಂಯೋಜಕರಾದ ಸತೀಶ್ ಭಟ್ ರಾಮಕುಂಜ, ಅಬ್ರಾಹಂ ಎಸ್.ಎ ಮತ್ತು ಲೊಕೇಶ್ ಬನ್ನೂರು ಉಪಸ್ಥಿತರಿದ್ದರು.


Share News

Comments are closed.

Exit mobile version