ಪುತ್ತೂರು: ಕಿಲ್ಲೆ ಮೈದಾನದಲ್ಲಿ ಸೌಹಾರ್ದತೆಯ ದೃಷ್ಟಿಯನ್ನು ಮುಂದಿಟ್ಟುಕೊಂಡು 15ನೇ ವರ್ಷದ ಅಮರ್–ಅಕ್ಟರ್–ಆಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಡಿ.23ರಿಂದ 28ರವರೆಗೆ ನಡೆಯಲಿದೆ ಎಂದು ಪಂದ್ಯಾಟದ ಆಯೋಜಕ ರಜಾಕ್ ಬಪ್ಪಳಿಗೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 23ರಂದು ಬಪ್ಪಳಿಗೆ ಟೀಮ್ ಊರವರ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಸಂಜೆ 5 ಗಂಟೆಗೆ ಪ್ರಜ್ಞಾ ಆಶ್ರಮದ ನಿವಾಸಿಗಳು ಪಂದ್ಯಾಟಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಡಿ. 24 ಹಾಗೂ 25ರಂದು ಗ್ರಾಮಗಳ 48 ತಂಡಗಳು ಭಾಗವಹಿಸುವ ‘ಹಳ್ಳಿ ಹುಡುಗರು ಪೇಟೆ ಟ್ರೋಫಿ’ ಪಂದ್ಯಾಟ ನಡೆಯಲಿದೆ.
ಡಿ.26ರಂದು ವಿವಿಧ ಇಲಾಖೆಗಳ 16 ತಂಡಗಳ ನಡುವೆ ಹಾಗೂ ಪುತ್ತೂರು ಚಾಂಪಿಯನ್ ಪಂದ್ಯಾಟ ಆಯೋಜಿಸಲಾಗಿದ್ದು, ಡಿ. 27 ಮತ್ತು 28ರಂದು ಓಪನ್ ವಿಭಾಗದಲ್ಲಿ ಅಮರ್–ಅಕ್ಟರ್–ಆಂತೋನಿ ರೋಲಿಂಗ್ ಟ್ರೋಫಿ ಪಂದ್ಯಾಟ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಮಾಯಿ ದೇ ದೇವುಸ್ ಚರ್ಚ್‌ನ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತ, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಜಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪಂದ್ಯಾಟದ ಅವಧಿಯಲ್ಲಿ ಪ್ರತಿದಿನ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮಗಳು ನಡೆಯಲಿವೆ ಎಂದು ರಜಾಕ್ ಬಪ್ಪಳಿಗೆ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಅಮರ್–ಅಕ್ಟರ್–ಆಂತೋನಿಯ ಸದಸ್ಯರಾದ ಅರುಣ್ ಕುಮಾರ್ ಬಪ್ಪಳಿಗೆ, ಲಿಯೋ ಮುಕ್ರಂಪಾಡಿ ಹಾಗೂ ಸೀತಾರಾಮ ಐಯ್ಯರ್ ಬಪ್ಪಳಿಗೆ ಉಪಸ್ಥಿತರಿದ್ದರು.



























