ಪುತ್ತೂರು: ಕಡಬ ಹಾಗೂ ಪುತ್ತೂರು ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟ ಬೊಲ್ಪು 2025-26 ನ. 22ರಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್. ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲಾ ಪಂಚಾಯತ್, ಕಡಬ ತಾಲೂಕು ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ಅಂತರ್ ತಾಲೂಕು ಕ್ರೀಡಾಕೂಟ ಸಂಘಟನಾ ಸಮಿತಿ, ಸವಣೂರು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಧ್ವಜವಂದನೆ ನೆರವೇರಿಸುವರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮೆರವಣಿಗೆಗೆ ಚಾಲನೆ ನೀಡುವರು. ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ಕ್ರೀಡಾಜ್ಯೋತಿ ಸ್ವೀಕಾರ ಮಾಡಲಿದ್ದಾರೆ ಎಂದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ, ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ, ಪ್ರತಾಪ್ ಸಿಂಹ ನಾಯಕ್ ಕೆ., ಬಿ.ಎಂ. ಫಾರೂಕ್, ಹರೀಶ್ ಕುಮಾರ್, ಎಸ್.ಎಲ್. ಭೋಜೇ ಗೌಡ, ಡಾ. ಧನಂಜಯ ಸರ್ಜಿ, ಐವನ್ ಡಿಸೋಜಾ ಅತಿಥಿಗಳಾಗಿರುವರು.
ಗ್ರಾಪಂ ಸದಸ್ಯ ಗಿರಿಶಂಕರ್ ಸುಲಾಯ ಮಾತನಾಡಿ, ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ 20+, 25+, 30+, 35+, 40+, 45+, 50+, 55+, 60+, 65+, 70+, 75+ ವಯೋಮಾನದಲ್ಲಿ ಕ್ರೀಡಾಕೂಟ ನಡೆಯಲಿದೆ. 100 ಮೀ, 200 ಮೀ, 400 ಮೀ, 800 ಮೀ, 1500 ಮೀ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡೆಸೆತ, ಚಕ್ರ ಎಸೆತ, ಈಟಿ ಎಸೆತದ ಜೊತೆಗೆ ಹಗ್ಗಜಗ್ಗಾಟ, ರಿಲೇ ಮತ್ತು ಮಿಕ್ಸ್’ಡ್ ರಿಲೇ ಸ್ಪರ್ಧೆ ಆಯೋಜಿಸಲಾಗಿದೆ. ಪುರುಷರ ಹಾಗೂ ಮಹಿಳೆಯರ ಪಂಚಾಯತ್ ಗೊಂದು ತಂಡ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಜಯಶ್ರೀ ಕೆ., ಪಿಡಿಓ ವಸಂತ ಶೆಟ್ಟಿ, ಸದಸ್ಯರಾದ ತೀರ್ಥರಾಮ ಕೆಡೆಂಜಿ, ಶೀನಪ್ಪ ಶೆಟ್ಟಿ ನೆಕ್ರಾಜೆ, ಅಬ್ದುಲ್ ರಜಾಕ್ ಕೆನರಾ, ರಫೀಕ್ ಎಂ.ಎ. ಉಪಸ್ಥಿತರಿದ್ದರು.



























