ಪುತ್ತೂರು: ಐಸಿಸಿ ವುಮೆನ್ಸ್ ವರ್ಲ್ಡ್ ಕಪ್ 2025 ಪಂದ್ಯದ ಫೈನಲ್ ಜಿದ್ದಾಜಿದ್ದಿಗೆ ಕ್ಷಣಗಣನೆ ಶುರುವಾಗಿದೆ. ಭಾರತ ಹಾಗೂ ಸೌತ್ ಆಫ್ರಿಕಾ ಕಪ್ ಎತ್ತಿ ಹಿಡಿಯಲು ಹಣಾಹಣಿ ಏರ್ಪಡಲಿದೆ. ಪಂದ್ಯ ಗೆದ್ದರೆ ಎರಡೂ ತಂಡಗಳಿಗೂ ಮೊದಲ ವಿಶ್ವಕಪ್ ಇದಾಗಲಿದೆ.
ನವೀ ಮುಂಬೈಯ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ 3 ಗಂಟೆಗೆ ಪಂದ್ಯ ಶುರುವಾಗಲಿದೆ. ಸೆಮಿ ಫೈನಲಿನಲ್ಲಿ ವೀರಾವೇಶದಿಂದ ಆಡಿದ ಭಾರತದ ವನಿತಾ ತಂಡ ಹೊಸ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.
ಹರ್ಮನ್ ಪ್ರೀತ್ ಕೌರ್ ಕ್ಯಾಪ್ಟನ್ ಶಿಪ್ಪಿನಲ್ಲಿ ಮುಂದುವರಿಯುತ್ತಿರುವ ಭಾರತದ ತಂಡ, ಸೌತ್ ಆಫ್ರಿಕಾದ ಲೌರಾ ವೋಲ್ವಾಟ್ ನೇತೃತ್ವದ ತಂಡವನ್ನು ಎದುರಿಸಲಿದ್ದಾರೆ.
ವನಿತಾ ಕ್ರಿಕೆಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಬಲಿಷ್ಠ ತಂಡವೇ. ಹಾಗಾಗಿ ಭಾರತ ವಿಶ್ವಕಪ್ ಎತ್ತಿಹಿಡಿಯುವುದು ಸುಲಭದ ಮಾತಲ್ಲ. ಹಾಗೆಂದು ಭಾರತದ ವನಿತೆಯರು ಮನಸ್ಸು ಮಾಡಿದರೆ ಸೌತ್ ಆಫ್ರಿಕಾವನ್ನು ಸೋಲಿಸುವುದು ಕಷ್ಟವೇನಲ್ಲ.
ಇಂದಿನ ಪಂದ್ಯದ ಜೊತೆಗೆ ಭಾರತ ಮೂರನೇ ಬಾರಿಗೆ ಮಹಿಳಾ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. 2005ರಲ್ಲಿ ಆಸ್ಟ್ರೇಲಿಯಾ ವಿರುದ್ಧ 98 ರನ್‌ಗಳಿಂದ ಮತ್ತು 2017 ರಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳಿಂದ ಸೋತಿತ್ತು.
ಇದು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಮೊದಲ ವಿಶ್ವಕಪ್ ಫೈನಲ್ ಆಗಿದೆ.
ಮಂಗಳೂರು ಮೂಲದ ಆಟಗಾರ್ತಿ:
ಓಡಿಐ ವರ್ಲ್ಡ್ ಕಪ್ ಪಂದ್ಯದ ವನಿತಾ ಕ್ರಿಕೆಟ್ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ಗಮನ ಸೆಳೆದಿದ್ದಾರೆ. ಪ್ರಮುಖ ಆಟಗಾರ್ತಿಯಾಗಿರುವ ಅವರು, ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ತಮ್ಮ ಪರಿಚಯ ಹೇಳುವ ಸಂದರ್ಭದಲ್ಲಿ, ತಾನು ಮುಂಬೈಯಲ್ಲಿ ಹುಟ್ಟಿದ್ದು, ಮಂಗಳೂರು ಮೂಲದವರು ಎಂದು ಹೇಳಿಕೊಂಡು ಗಮನ ಸೆಳೆದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು.


























