ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮುಡಿಪು ಕಂಬಳಪದವಿನಲ್ಲಿ ನಿರ್ಮಾಣಗೊಂಡ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥಗಳ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ವಾಹನಗಳಿಂದಾಗುವ ವಾಯುಮಾಲಿನ್ಯ ತಡೆಗಟ್ಟುವುದಕ್ಕೆ ಕೇಂದ್ರ ಸರ್ಕಾರವು ದೇಶದೆಲ್ಲೆಡೆ ಇಲೆಕ್ಟ್ರಿಕ್ ಬಸ್‌ಗಳ ಬಳಕೆಯನ್ನು ಹೆಚ್ಚು ಜನಪ್ರಿಯಗೊಳಿಸುತ್ತಿದೆ. ಅದರಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಕರ್ನಾಟಕಕ್ಕೆ ಒಟ್ಟು 750 ಇಲೆಕ್ಟ್ರಿಕಲ್ ಬಸ್‌ಗಳು ಮಂಜೂರಾಗಿದ್ದು, ಆ ಪೈಕಿ ಮಂಗಳೂರು ನಗರಕ್ಕೆ 100 ಬಸ್‌ಗಳನ್ನು ಮಂಜೂರುಗೊಳಿಸಲಾಗಿದೆ ಎಂದರು.
ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಕಲಬುರ್ಗಿ, ಮೈಸೂರು, ಶಿವಮೊಗ್ಗ ಸೇರಿದಂತೆ ಒಟ್ಟು 10 ನಗರಗಳಿಗೆ ತಲಾ 100 ಇಲೆಕ್ಟ್ರಿಕಲ್ ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಪರಿಸರ ಸ್ನೇಹಿಯಾದ ಈ ಬಸ್‌ಗಳು ಶೀಘ್ರದಲ್ಲೇ ಮಂಗಳೂರು ನಗರದ ವಿವಿಧ ರೂಟ್‌ಗಳಲ್ಲಿ ರಸ್ತೆಗಿಳಿಯಲಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ