ಪುತ್ತೂರು: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಸಂಭ್ರಮಾಚರಣೆ 2024ರ ಅಂಗವಾಗಿ ಶುಕ್ರವಾರ ಸಂಸ್ಥೆಯ ಕಚೇರಿಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.
ವೃಕ್ಷೋ ರಕ್ಷತಿ ರಕ್ಷತಃ: ಪೊಲೀಸ್ ನಿರೀಕ್ಷಕ ಜಿ.ಜೆ. ಸತೀಶ್
ಪೊಲೀಸ್ ನಿರೀಕ್ಷಕ ಜಿ.ಜೆ. ಸತೀಶ್ ಮಾತನಾಡಿ, ನಿಸರ್ಗದ ಜೊತೆ ಒಡನಾಟ ಇಟ್ಟುಕೊಳ್ಳಬೇಕು. ಪ್ರಕೃತಿ ನಮಗಾಗಿ ಅಲ್ಲ; ಪ್ರಕೃತಿಗಾಗಿ ನಾವು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ವೃಕ್ಷೋ ರಕ್ಷತಿ ರಕ್ಷತಃ ಎಂಬಂತಾಗಬೇಕು. ಈ ನಿಟ್ಟಿನಲ್ಲಿ ಎಸ್.ಕೆ.ಜಿ. ಸೊಸೈಟಿ ಸಸಿ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ವಿಚಾರ. ಸಂಸ್ಥೆ 100 ಶಾಖೆಗಳನ್ನು ಹೊಂದುವಂತಾಗಲಿ ಎಂದರು.
ಪ್ರಕೃತಿ ರಕ್ಷಣೆ ನಮ್ಮ ಕರ್ತವ್ಯ: ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ
ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಮಾತನಾಡಿ, ಎಲ್ಲಾ ಜೀವಿಗಳು ಪರಿಸರದ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡು, ಪರಿಸರಕ್ಕಾಗಿ ಬದುಕುತ್ತಿವೆ. ಆದರೆ ಮನುಷ್ಯ ಮಾತ್ರ ವಿಕಾಸದ ಹೆಸರಲ್ಲಿ ಪ್ರಕೃತಿಯಿಂದ ದೂರವಾಗುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ಜನರ ಮನಸ್ಸಿನಲ್ಲಿ, ಮನೆಯಲ್ಲಿ ಹೊಸ ಗಾಳಿಯನ್ನು ಬೀಸುವಂತಾಗಲಿ. ಆಹಾರ, ಶುದ್ಧ ಗಾಳಿ ನಮ್ಮ ಮೂಲಭೂತ ಹಕ್ಕು. ಅದರ ಜೊತೆಗೆ, ಅವುಗಳನ್ನು ಕಾಪಾಡುವುದು ನಮ್ಮ ಮೂಲಭೂತ ಕರ್ತವ್ಯ ಆಗಬೇಕು ಎಂದರು.
ಮರವನ್ನು ಚಿತ್ರಗಳ ಮೂಲಕ ನೋಡುವ ದಿನ ಬಾರದಿರಲಿ: ತಾ.ಪಂ. ಯೋಜನಾಧಿಕಾರಿ ಸುಕನ್ಯಾ
ತಾ.ಪಂ. ಯೋಜನಾಧಿಕಾರಿ ಸುಕನ್ಯಾ ಮಾತನಾಡಿ, ಇಂದಿನ ಪರಿಸ್ಥಿತಿ ನೋಡುವಾಗ ಮನುಷ್ಯ ಎಷ್ಟು ಕ್ರೂರಿ ಎಂದೆನಿಸುತ್ತದೆ. ರಸ್ತೆಗಾಗಿ ಮರ ಕಡಿಯುವುದು ಅನಿವಾರ್ಯ. ಆದರೆ ರಸ್ತೆ ನಿರ್ಮಾಣವಾದ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಸಸಿ ನೆಡುವ ಕೆಲಸ ಆಗಬೇಕು. ಇಲ್ಲದೇ ಇದ್ದರೆ ಮುಂದೊಂದು ದಿನ ಮರಗಳನ್ನು ಚಿತ್ರಗಳಲ್ಲಿ ನೋಡುವ ದಿನ ಬರಬಹುದು. ಆದ್ದರಿಂದ ಎಸ್.ಕೆ.ಜಿ.ಐ. ಕೋ- ಆಪರೇಟಿವ್ ಸೊಸೈಟಿ ವಿತರಿಸುತ್ತಿರುವ ಸಸಿಯನ್ನು ಮನೆಗೆ ಕೊಂಡೊಯ್ದು, ಮನೆಯಲ್ಲಿ ನೆಟ್ಟು ಪೋಷಿಸಿ ಎಂದರು.
ವೈದ್ಯಕೀಯ ಶಿಬಿರಕ್ಕೂ ಸಹಕಾರ ಇರಲಿ: ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ
ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಮಾತನಾಡಿ, ಜಗತ್ತಿನಾದ್ಯಂತ ಹಲವು ಜೀವಗಳು ತಾಪಮಾನದ ವೈಪರೀತ್ಯಕ್ಕೆ ಬಲಿಯಾದದ್ದನ್ನು ನಾವು ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಎಸ್.ಕೆ. ಜಿ.ಐ. ಬ್ಯಾಂಕ್ ಹಮ್ಮಿಕೊಂಡಿರುವ ಸಸಿ ವಿತರಣಾ ಕಾರ್ಯಕ್ರಮ ಮಾದರಿ. ಮುಂದೆ ಸೊಸೈಟಿಯ ವಜ್ರ ಮಹೋತ್ಸವದ ಅಂಗವಾಗಿ ವಿಶ್ವಬ್ರಾಹ್ಮಣ ಸೇವಾ ಸಂಘದ ಸಹಕಾರದಲ್ಲಿ ಆಗಸ್ಟ್ ನಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ಆ ಕಾರ್ಯಕ್ರಮಕ್ಕೂ ಎಲ್ಲರ ಸಹಕಾರ ಬೇಕು ಎಂದರು.
ಸಾಮಾಜಿಕ ಕಾರ್ಯದ ಜೊತೆ ಪ್ರಕೃತಿ ಸೇವೆ: ಸೊಸೈಟಿ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಮಾತನಾಡಿ, ಚಿನ್ನದ ಕೆಲಸಗಾರರು ಆರ್ಥಿಕ ಸಂಕಷ್ಟದ ಸುಳಿಗೆ ಬಿದ್ದ ಸಂದರ್ಭ ದೇವಮಾನವರಾಗಿ ಬಂದವರು ಪಾಲ್ಕೆ ಬಾಬುರಾಯಾಚಾರ್ಯ ಅವರು. ಅವರು ಆರಂಭಿಸಿದ ಸಂಸ್ಥೆ ಇಂದು ಕೋಟ್ಯಾಂತರ ರೂ. ಲಾಭವನ್ನು ಗಳಿಸುತ್ತಿದೆ. ಸಾಮಾಜಿಕ ಕಳಕಳಿಯಿಂದ ಆರಂಭವಾದ ಸಂಸ್ಥೆ ಇಂದು ಪ್ರಕೃತಿಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಾಗತಿಕವಾಗಿ ಪ್ರಕೃತಿಯ ಅಸಮತೋಲನದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದಕ್ಕೆ ಪೂರ್ಣವಿರಾಮ ಹಾಕಬೇಕಾದರೆ ಪ್ರತಿಯೊಬ್ಬರು ಪ್ರಕೃತಿಯ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು. ನಮ್ಮ ಮಕ್ಕಳಿಗೂ ಇದರ ಬಗ್ಗೆ ತಿಳಿಸಿಕೊಡಬೇಕು. ನಮ್ಮ ಭೂಮಿ ಒಂದು ಇಂಚು ಬೆಳೆಯಲು ಐನೂರು ವರ್ಷ ಬೇಕಂತೆ. ಆದರೆ ಅದೇ ಮಣ್ಣನ್ನು ಕ್ಷಣಾರ್ಧದಲ್ಲಿ ನಾಶ ಮಾಡುತ್ತಿದ್ದೇವೆ. ಮರ ನೆಡುವುದರಿಂದ ಮಣ್ಣಿನ ಸವಕಳಿ, ಪ್ರಕೃತಿಯ ರಕ್ಷಣೆ ಸೇರಿದಂತೆ ಹಲವು ಪ್ರಯೋಜನ ಪಡೆದುಕೊಳ್ಳಲು ಸಾಧ್ಯ ಒಂದು ಎಂದರು.
ನಿವೃತ್ತ ಶಿಕ್ಷಕ ಶಂಕರನಾರಾಯಣ, ಪಿ.ಎಸ್.ಐ.ಗಳಾದ ನಂದಕುಮಾರ್, ಸುಬ್ರಹ್ಮಣ್ಯ ಎಚ್., ಮಾಜಿ ನಿರ್ದೇಶಕ ರಮೇಶ್ ಆಚಾರ್ಯ ಮಾಮೇಶ್ವರ, ನಗರಸಭೆ ಸದಸ್ಯೆ ಇಂದಿರಾ ಪುರುಷೋತ್ತಮ ಅವರಿಗೆ ಸಾಂಕೇತಿಕವಾಗಿ ಗಿಡ ವಿತರಿಸಲಾಯಿತು.
ಸೊಸೈಟಿ ನಿರ್ದೇಶಕಿ ರೋಹಿಣಿ ಎಂ.ಪಿ. ಮೊದಲಾದವರು ಉಪಸ್ಥಿತರಿದ್ದರು.
ಸಿಬ್ಬಂದಿ ರಾಜೇಶ್ ಆಚಾರ್ಯ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕಿ ಉಷಾ ಆಚಾರ್ಯ ಸ್ವಾಗತಿಸಿದರು. ಸಿಬ್ಬಂದಿ ಕಿರಣ್ ಬಿ.ವಿ. ವಂದಿಸಿದರು. ರಾಮ್ ಪ್ರಸಾದ್ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು.
ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ 60ನೇ ವರ್ಷದ ವಜ್ರಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ವರ್ಷಾದ್ಯಂತ 60 ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.