Thursday, November 21
Share News

ಬೆಂಗಳೂರು: ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಂಗ್ರಹಿಸಲು ಮಹಿಳಾ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ನೆರವು ಪಡೆಯುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಗುರುವಾರ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ್ ಅವರು, ಈ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಆಸ್ತಿ ತೆರಿಗೆ ಒಟ್ಟು ರೂ.1,860.17 ಕೋಟಿ ಬಾಕಿ ಇದೆ. ಅಷ್ಟನ್ನೂ ವಸೂಲು ಮಾಡಲು ತೀರ್ಮಾನಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು, ಸ್ತ್ರೀಶಕ್ತಿ ಗುಂಪುಗಳ ಸೇವೆಯನ್ನು ಬಳಸಿಕೊಂಡು ನೀರಿನ ಶುಲ್ಕ ಮತ್ತು ಆಸ್ತಿ ತೆರಿಗೆಯನ್ನು ಬಡ್ಡಿ ಸಮೇತ ಬಾಕಿ ವಸೂಲಿ ಮಾಡಲಾಗುವುದು. ವಸೂಲಾದ ಮೊತ್ತದ ಶೇ 5ರಷ್ಟು ಕಮಿಷನ್‌ನನ್ನು ವಸೂಲಿ ಮಾಡಿದವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

315 ನಗರ ಸ್ಥಳೀಯ ಸಂಸ್ಥೆಗಳು, 10 ಮಹಾನಗರ ಪಾಲಿಕೆಗಳು, 61 ನಗರ ಸಭೆಗಳು, 114 ಪಟ್ಟಣ ಪಂಚಾಯಿತಿಗಳು ಹಾಗೂ 4 ಅಧಿಸೂಚಿತ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವಸೂಲಿಯ ಹೊಣೆಯನ್ನು ಸ್ವಸಹಾಯ ಸಂಘಗಳಿಗೆ ವಹಿಸಲಾಗುತ್ತದೆ ಎಂದು ತಿಳಿಸಿದರು.

2025ರ ವೇಳೆಗೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಮಿತಿಯಲ್ಲಿ ಅಂದಾಜು 202.58 ಲಕ್ಷ ಜನಸಂಖ್ಯೆಯನ್ನು ಹೊಂದಲಿವೆ. ಪ್ರಸ್ತುತ 51.51 ಲಕ್ಷ ಮನೆಗಳಿದ್ದು, ಅವುಗಳಲ್ಲಿ 30.05 ಲಕ್ಷ ಕುಡಿಯುವ ನೀರಿನ ಸಂಪರ್ಕಗಳನ್ನು ಹೊಂದಿವೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ಶೇ.40ರಷ್ಟು ನೀರಿನ ಶುಲ್ಕ ವಸೂಲಿ ಬಾಕಿ ಉಳಿದಿದ್ದು, ಪ್ರತಿ ತಿಂಗಳು ಬಾಕಿ ಸಂಗ್ರಹವನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಹೇಳಿದರು.


Share News

Comments are closed.

Exit mobile version