Friday, November 22
Share News

ಪುತ್ತೂರು: ಮಹಿಳಾ ಸಬಲೀಕರಣ ಎನ್ನುತ್ತಲೇ ಇನ್ನೊಂದೆಡೆ ತಂಬಾಕು ಸೇವಿಸುವ ಮಹಿಳೆಯರ ಸಂಖ್ಯೆಯೂ ಅಧಿಕವಾಗುತ್ತಿದೆ ಎಂದು ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಳವಳ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಕಚೇರಿಯಲ್ಲಿ ನಡೆದ ವಿಶ್ವ ತಂಬಾಕು ವಸ್ತು ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ತಂಬಾಕು ಸೇವನೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಿಮಗೆಲ್ಲಾ ಅರಿವಿದೆ. ಪ್ರತಿವರ್ಷ ತಂಬಾಕು ಸೇವನೆಯಿಂದಲೇ 70- 80 ಲಕ್ಷದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ತಂಬಾಕಿನಿಂದಾಗುವ ದುಷ್ಪರಿಣಾಮದ ತೀವ್ರತೆಯ ಬಗ್ಗೆ ತಿಳಿದುಕೊಳ್ಳಬೇಕು. ಇನ್ನೂ ಕಳವಳದ ವಿಷಯವೇನೆಂದರೆ ತಂಬಾಕು ಸೇವಿಸುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುವುದು. 2019ರಲ್ಲಿ 3.8%ರಷ್ಟು ಮಹಿಳೆಯರು ತಂಬಾಕು ಸೇವಿಸುತ್ತಿದ್ದರು. ಇದರ ಪ್ರಮಾಣ 2024ರಲ್ಲಿ 6.2%ಕ್ಕೆ ಏರಿಕೆಯಾಗಿದೆ ಎಂದರು.

ಮಾದಕ ವಸ್ತುಗಳ ಜಾಲ ದಿನದಿಂದ ದಿನಕ್ಕೆ ವ್ಯಾಪಕ ಆಗುತ್ತಲೇ ಹೋಗುತ್ತಿದೆ. ಆದ್ದರಿಂದ ತಂಬಾಕಿನ ಬಗ್ಗೆ ಜಾಗೃತಿ ಮೂಡಿಸಲೇ ಬೇಕಾಗಿದೆ. ಇಂದು ಎಳೆ ವಯಸ್ಸಿನಲ್ಲೇ ಮಕ್ಕಳು ಅಮಲು ಪದಾರ್ಥಗಳ ದಾಸರಾಗುತ್ತಿರುವ ದೃಶ್ಯವನ್ನು ನಾವು ಕಾಣುತ್ತಿದ್ದೇವೆ. ಮಕ್ಕಳು ಮಾದಕ ಪದಾರ್ಥಗಳ ಕಲಿಕೆ ಆರಂಭಿಸುವುದು ಸ್ವೀಟ್ ಸುಪಾರಿಯಿಂದ. ಬಳಿಕ ದೊಡ್ಡ ದೊಡ್ಡ ಚಟಗಳಿಗೆ ಬಲಿ ಬೀಳುತ್ತಾರೆ. ಹಾಗಾಗಿ ಮಕ್ಕಳು ತಪ್ಪು ಮಾಡದಂತೆ ಎಚ್ಚರ ವಹಿಸಿ. ಜಾಗೃತಿಯನ್ನು ಪಡೆದುಕೊಳ್ಳಿ. ಮಕ್ಕಳ ಬಗ್ಗೆ ಜಾಗರೂಕರಾಗಿರಿ ಎಂದು ಕಿವಿಮಾತು ಹೇಳಿದರು.

ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಲೊಕೇಶ್ ಹೆಗ್ಡೆ ಮಾತನಾಡಿ, ಅಮಲು ಪದಾರ್ಥಗಳ ಸೇವನೆಗೆ ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದರು.

ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.


Share News

Comments are closed.

Exit mobile version