Gl jewellers
ಧಾರ್ಮಿಕ

ಬನ್ನೂರು ಶನೀಶ್ವರ ಸನ್ನಿಧಿಯಲ್ಲಿ 20ನೇ ವರ್ಷದ ಸಾಮೂಹಿಕ ಶನಿಪೂಜೆ

ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ  20ನೇ ವರ್ಷದ ಸಾಮೂಹಿಕ ಶ್ರೀಶನಿಪೂಜೆಯು ಫೆ 8ರಂದು ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬನ್ನೂರು ಶಾಲಾ ಬಳಿಯ ಸ್ಪೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ 20ನೇ  ವರ್ಷದ ಸಾಮೂಹಿಕ ಶ್ರೀ ಶನಿ ಪೂಜೆ ಫೆ. 8ರಂದು ನಡೆಯಿತು.

Papemajalu garady
Karnapady garady

ಅರ್ಚಕ ಹರೀಶ್ ಶಾಂತಿ  ಅವರ ನೇತೃತ್ವದಲ್ಲಿ ನಡೆದ ಪೂಜಾ  ಕಾರ್ಯಕ್ರಮದಲ್ಲಿ  ಬೆಳಿಗ್ಗೆ ಹೋಮ, ಶ್ರೀ ಶನೀಶ್ವರ ದೇವರ ಪೂಜೆ ಆರಂಭವಾಗಿ ಮಧ್ಯಾಹ್ನ ಮಹಾ ಮಂಗಳಾರತಿ, ಶನೀಶ್ವರ ಕುಣಿತ ಭಜನಾ ಮಂಡಳಿಯವರಿಂ ಕುಣಿತ ಭಜನೆ ನಡೆಯಿತು.

ಇದನ್ನು ಓದಿ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಸಂದರ್ಶನ

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವನ ನೀಡಿದ ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರ ಶ್ರೀ ಮಹಾಬಲ ಸ್ವಾಮೀಜಿ, ನವಗ್ರಹಗಳಿಗೆ ಶನಿದೇವರು ಶ್ರೇಷ್ಠ. ಯಾವ ದೈವ, ದೇವರನ್ನಾದರೂ ಭಕ್ತಿ, ಶ್ರದ್ಧೆಯಿಂದ ದೇವರ ಉಪಾಸನೆ ಮಾಡಿದಾಗ ಮಾತ್ರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಜನೆಯ ಮೂಲಕ ಭಗವಂತನಿಗೆ ಸಮರ್ಪಣೆ ಮಾಡುವ ಸುಲಭದ ದಾರಿಯಾಗಿದೆ. ಭಜನೆಗೆ ಎಲ್ಲಿಯೂ ನಿಷೇಧವಿಲ್ಲ. ಕಲಿಯುಗದಲ್ಲಿ ದೇವರನ್ನು ಮುಟ್ಟುವ ಸುಲಭದ ದಾರಿ ಭಜನೆಯಾಗಿದೆ. ಭಗೀರಥ ಪ್ರಯತ್ನದಿಂದ ಬನ್ನೂರಿನ ಶನೀಶ್ವರ ಕ್ಷೇತ್ರ ಮುನ್ನಡೆಯುತ್ತಿದ್ದು ಧರ್ಮದರ್ಶಿಯವರ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮ ಜಾಗೃತಿಯ ಜೊತೆಗೆ ಇಂದು ನಮ್ಮ ಧರ್ಮದ ಸಂಸ್ಕೃತಿಯನ್ನು ನೀಡುವ ಅನಿವಾರ್ಯತೆಯಿದೆ. ನೂರಾರು ಸವಾಲು, ಸಂಕಷ್ಟಗಳನ್ನು ಎದುರಿಸುವ ಸಂಕಲ್ಪ ಮಾಡಬೇಕಿದೆ. ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿ ಸಂಸ್ಕಾರ ಬೆಳೆಸಬೇಕಾದ ಹೊಣೆ ತಾಯಂದಿರಲ್ಲಿದೆ. ಹಿಂದೂ ಸಮಾಜ ಒಗ್ಗಟ್ಟಿನಿಂದ ಹೋದಾಗ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದ ಅವರು, ಬನ್ನೂರಿನ ಶನೀಶ್ವರ ದೇವರ ಸನ್ನಿಧಿಯು ದೇವಾಲಯವಾಗಿ ಹಿಂದು ಸಮಾಜದ ಶಕ್ತಿಯ ಕೇಂದ್ರವಾಗಿ ಬೆಳೆಯಲಿ ಎಂದರು.

ನಗರ ಸಭೆಯ ಉಪಾಧ್ಯಕ್ಷ ಬಾಲಚಂದ್ರ ಮರೀಲ್ ಮಾತನಾಡಿ, ಮಕ್ಕಳಿಗೆ ವಿದ್ಯೆಯ ಜೊತೆಗೆ ಧಾರ್ಮಿಕ ಜಾಗೃತಿ ಮೂಡಿಸಬೇಕು. ಯುವ ಜನಾಂಗವನ್ನು ಧಾರ್ಮಿಕ ವಿಚಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದರಿಂದ ಮುಂದೆ ಬರುವ ಎಲ್ಲಾ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದರು.

ಶನೀಶ್ವರ ಸನ್ನಿಧಿಯ ಧರ್ಮದರ್ಶಿ ದಿನೇಶ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಕಳೆದ 20 ವರ್ಷಗಳಿಂದ ಶನೀಶ್ವರ ಸನ್ನಿಧಿಯಲ್ಲಿ ಪ್ರತಿ ಶನಿವಾರ ಪೂಜೆ, ಭಜನೆ ನಡೆಯುತ್ತಿದೆ. ಈಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಅಗಿದೆ. ಊರ, ಪರವೂರ ಸನ್ನಿಧಿಯಲ್ಲಿ ಪ್ರಾರ್ಥಿಸಿದ ಭಕ್ತಾದಿಗಳ ಇಷ್ಟಾರ್ಥಗಳು ನೆರವೇರುತ್ತಿದೆ. ಇಲ್ಲಿ ಪ್ರಾರಂಭಗೊಂಡ ಮಕ್ಕಳ ಕುಣಿತ ಭಜನಾ ತಂಡವು ಬೆಂಗಳೂರು ತನಕ ಹೋಗಿದೆ. ಸನ್ನಿಧಿಯ ಆವರಣದಲ್ಲಿ ಅಶ್ವತ್ಥ ಗಿಡ ನೆಟ್ಟು ಏಳು ವರ್ಷ ಪೂರ್ಣಗೊಂಡಿದ್ದು ಮುಂದಿನ ವರ್ಷ ಊರ, ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ಅಶ್ವತ್ಥೋಪನಯನ ನಡೆಸಲಾಗುವುದು ಎಂದು ತಿಳಿಸಿದರು.

ಅರ್ಚಕ ಹರೀಶ್ ಶಾಂತಿ, ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ದೀಪಕ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:

ಶನೀಶ್ವರ ಮಕ್ಕಳ ಕುಣಿತ ಭಜನಾ ತಂಡಕ್ಕೆ ತರಬೇತಿ ನೀಡುತ್ತಿರುವ ನಾಗೇಶ್, ಕಾರ್ತಿಕ್‌ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಸ್ಪೂರ್ತಿ ಬಾಲ ಸಭಾದ ಸದಸ್ಯರು ಪ್ರಾರ್ಥಿಸಿದರು. ಧರ್ಮದರ್ಶಿ ದಿನೇಶ್ ಸಾಲ್ಯಾನ್ ಸ್ವಾಗತಿಸಿದರು. ಯುವಕ ಶರತ್ ಕುಮಾರ್, ಪ್ರಮೋದ್ ಕುಮಾರ್, ಗಣೇಶ್, ನವೀನ್ ಕುಮಾರ್ ತಾಂಬೂಲ ನೀಡಿ, ಶಾಲು ಹಾಕಿ ಸ್ವಾಗತಿಸಿದರು. ಯುವಕ ಮಂಡಲದ ಉಪಾಧ್ಯಕ್ಷ ನವೀನ್ ಕುಮಾರ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಶ್ರೀದೇವಿ ಯಕ್ಷಗಾನ ಕಲಾ ಸಂಘ ಬನ್ನೂರು ಇವರಿಂದ ದಕ್ಷಯಜ್ಞ ಬಾರ್ಗವ ವಿಜಯ ಎಂಬ ಯಕ್ಷಗಾನ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts