ಪುತ್ತೂರು: ಹತ್ತೂರ ಮುತ್ತು ಎಂದೇ ಖ್ಯಾತಿ ಪಡೆದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತೆ ಸುದ್ದಿಯಲ್ಲಿದೆ. ಒಂದೆಡೆ ಅಭಿವೃದ್ಧಿಗೆ ತೆರೆದುಕೊಳ್ಳುತ್ತದೆ ಎನ್ನುವ ಸುದ್ದಿಯಾದರೆ, ಇನ್ನೊಂದೆಡೆ ಮನೆ – ಅಂಗಡಿಗಳ ತೆರವು ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಜೊತೆ ಮಾತನಾಡಿದಾಗ, ದೇವಸ್ಥಾನದ ಬಗ್ಗೆ ತಮಗಿರುವ ಕಲ್ಪನೆಯನ್ನು ಹೀಗೆ ಬಿಚ್ಚಿಟ್ಟರು.
ಪ್ರಶ್ನೆ: ದೇವಸ್ಥಾನದ ಅಭಿವೃದ್ಧಿಯ ದೃಷ್ಟಿಯನ್ನಿಟ್ಟುಕೊಂಡಿದ್ದೀರಿ. ತೆರವು ಕಾರ್ಯ ಹಾಗೂ ಪ್ರಸಕ್ತ ಚಾಲ್ತಿಯಲ್ಲಿರುವ ಕಾಮಗಾರಿಗಳ ಬಗ್ಗೆ ತಿಳಿಸಿ…
– ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಒಂದಷ್ಟು ಕಾಮಗಾರಿಗಳಿಗೆ ರೂಪುರೇಷೆ ಸಿದ್ಧಪಡಿಸಿದ್ದೇವೆ. ಅದರಲ್ಲಿ ಮೊದಲ ಭಾಗವಾಗಿ ಸುಮಾರು 2 ಕೋಟಿ ರೂ. ವೆಚ್ಚದ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಪಕ್ಕದಲ್ಲಿರುವ ತೋಡಿನ ಬದಿಗೆ ತಡೆಗೋಡೆ ನಿರ್ಮಿಸುತ್ತಿದ್ದು, ಜಾತ್ರೆಯ ಒಳಗಡೆ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಉದ್ದೇಶ ಹೊಂದಿದ್ದೇವೆ.

ಇದಲ್ಲದೇ, ದೇವಸ್ಥಾನದ ಜಾಗದಲ್ಲಿರುವ ಮನೆಗಳಲ್ಲಿ ವಾಸವಾಗಿರುವವರ ಮನವೊಲಿಸಿ, ಮನೆಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ. 3 ಮನೆಗಳಿಗೆ ಸಮಯ ಕೇಳಿದ್ದಾರೆ. ಆ ನಿಗದಿತ ಸಮಯದೊಳಗೆ ಎಲ್ಲಾ ಮನೆಗಳ ತೆರವು ಆಗಲಿದೆ. ಮಾಸ್ಟರ್ ಪ್ಲಾನ್’ಗೆ ಅಂತಿಮ ಮುದ್ರೆ ಬೀಳುತ್ತಿದ್ದಂತೆ ಕಾಮಗಾರಿಗಳು ವೇಗ ಪಡೆದುಕೊಳ್ಳಲಿದೆ.
ಪ್ರಶ್ನೆ: ಮಾಸ್ಟರ್ ಪ್ಲಾನ್ ಈಗ ಯಾವ ಹಂತದಲ್ಲಿದೆ?
– ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದೇವು. ಆದರೆ ಜಿಲ್ಲಾಧಿಕಾರಿಗಳು ಮಾಸ್ಟರ್ ಪ್ಲಾನನ್ನು ಹಿಂದಕ್ಕೆ ಕಳುಹಿಸಿಕೊಟ್ಟಿದ್ದಾರೆ. ಕಾರಣವನ್ನು ತಿಳಿಸಿದ್ದಾರೆ.
ಮಾಸ್ಟರ್ ಪ್ಲಾನ್ ಅನ್ನು ಸಹಾಯಕ ಆಯುಕ್ತರ ಮೂಲಕವೇ ಕಳುಹಿಸಿಕೊಡಬೇಕು. ಹಾಗಾಗಿ ‘ಪ್ರಾಪರ್ ಚಾನೆಲ್’ನಲ್ಲೇ ಮಾಸ್ಟರ್ ಪ್ಲಾನನ್ನು ಕಳುಹಿಸಿಕೊಡಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಮಾಸ್ಟರ್ ಪ್ಲಾನ್ ಜಿಲ್ಲಾಧಿಕಾರಿ ಅವರಿಂದ ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಕೆಯಾಗಿ, ಅಲ್ಲಿ ಅಂತಿಮ ಮುದ್ರೆ ಬೀಳುವುದನ್ನೇ ಕಾಯುತ್ತಿದ್ದೇವೆ. ಆದಷ್ಟು ಶೀಘ್ರದಲ್ಲಿ ಮಾಸ್ಟರ್ ಪ್ಲಾನ್ ಸಿದ್ಧ ಆಗಬೇಕಾಗಿದೆ. ಇದರ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಉತ್ಸುಕರಾಗಿದ್ದಾರೆ. ಹಾಗಾಗಿ ಆದಷ್ಟು ಶೀಘ್ರವಾಗಿ ಕಾಮಗಾರಿ ಆರಂಭಗೊಳ್ಳುವುದು ನಿಶ್ಚಿತ.
ಪ್ರಶ್ನೆ: ಮಾಸ್ಟರ್ ಪ್ಲಾನ್ ಹೇಗಿದೆ? ಯಾವೆಲ್ಲಾ ಯೋಜನೆಗಳನ್ನು ಸಿದ್ಧಪಡಿಸಿದ್ದೀರಿ?
– ಯಾತ್ರೀ ನಿವಾಸ, ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಹಲವು ಕಾಮಗಾರಿಗಳು ನಡೆಯಲಿವೆ.
21 ಕೋಟಿ ರೂ.ನಲ್ಲಿ ಯಾತ್ರಿ ನಿವಾಸ ನಿರ್ಮಾಣ, 1.89 ಕೋಟಿ ರೂ.ನಲ್ಲಿ ಗೋಶಾಲೆ ಹಾಗೂ ಬಸವನ ಕೊಟ್ಟಿಗೆ ನಿರ್ಮಾಣ, 3.64 ಕೋಟಿ ರೂ.ನಲ್ಲಿ ದೇವಸ್ಥಾನದ ವಾಯುವ್ಯ ಭಾಗದಲ್ಲಿ ರಸ್ತೆ ನಿರ್ಮಾಣ, 1.40 ಕೋಟಿ ರೂ.ನಲ್ಲಿ ಪ್ರವೇಶ ದ್ವಾರ ನಿರ್ಮಾಣ ಕಾಮಗಾರಿ, 1.81 ಕೋಟಿ ರೂ.ನಲ್ಲಿ ಉತ್ತರ, ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ಆವರಣ ಗೋಡೆ, 3.60 ಕೋಟಿ ರೂ.ನಲ್ಲಿ ಸಮುದಾಯ ಕೌಶಲ್ಯ ಅಭಿವೃದ್ಧಿ ಕೇಂದ್ರ ನಿರ್ಮಾಣ, 2.10 ಕೋಟಿ ರೂ.ನಲ್ಲಿ ಮುಚ್ಚಿದ ಪಾದಾಚಾರಿ ಮಾರ್ಗ ನಿರ್ಮಾಣ, 1.76 ಕೋಟಿ ರೂನಲ್ಲಿ ಶಿವನ ಮೂರ್ತಿಗೆ ಆವರಣ ಗೋಡೆ ಹಾಗೂ ಛಾವಣಿ ಅಳವಡಿಕೆ, 1.80 ಕೋಟಿ ರೂ.ನಲ್ಲಿ ನವಗ್ರಹ ವನ ಮತ್ತು ಆಸನಗಳು ಹಾಗೂ ಆವರಣಗೋಡೆ ನಿರ್ಮಾಣ, 2.50 ಕೋಟಿ ರೂ.ನಲ್ಲಿ ಅನ್ನದಾಸೋಹ ಕಟ್ಟಡಕ್ಕೆ ಮೊದಲನೇ ಮಹಡಿ ನಿರ್ಮಾಣ, 1.60 ಕೋಟಿ ರೂ.ನಲ್ಲಿ ಟಾಯ್ಲೆಟ್ ಬ್ಲಾಕ್ ನಿರ್ಮಾಣ, 3.50 ಕೋಟಿ ರೂ.ನಲ್ಲಿ ಸಮುದಾಯ ಕೇಂದ್ರ, ಪ್ರಥಮ ಚಿಕಿತ್ಸೆ ಮತ್ತು ನಿಯಂತ್ರಣ ಕಚೇರಿ ನಿರ್ಮಾಣ, 3.42 ಕೋಟಿ ರೂ.ನಲ್ಲಿ ವಿಐಪಿ ಲಾಂಜ್, ಕ್ಲೋಕ್ ರೂಮ್, ಪ್ರಸಾದ ಕೌಂಟರ್, ಘೋಷಣಾ ಕೇಂದ್ರ ನಿರ್ಮಾಣ, 2.15 ಕೋಟಿ ರೂ.ನಲ್ಲಿ ಕಲಾಗ್ರಾಮ, ಸಂಗೀತ ಮತ್ತು ನೃತ್ಯಶಾಲೆ ಕೇಂದ್ರ ನಿರ್ಮಾಣ, 1.45 ಕೋಟಿ ರೂ.ನಲ್ಲಿ ವಾಹನ ನಿಲುಗಡೆಗೆ ಛಾವಣಿ ನಿರ್ಮಾಣ, 2.15 ಕೋಟಿ ರೂ.ನಲ್ಲಿ ವಿಶ್ರಾಮ ಮಂದಿರ, ಸ್ನಾನ ಮಂದಿರ ನಿರ್ಮಾಣ, 2.17 ಕೋಟಿ ರೂ.ನಲ್ಲಿ ಪಂಚಾಕ್ಷರಿ ಮಂಟಪ ಮತ್ತು ವೇದಪಾಠ ಶಾಲಾ ನಿರ್ಮಾಣ, 1.81 ಕೋಟಿ ರೂ.ನಲ್ಲಿ ಹೊರ ಪ್ರಾಕಾರಕ್ಕೆ ಶೀಟ್ ರೂಫಿಂಗ್ ಮೇಲ್ಛಾವಣಿ ಅಳವಡಿಕೆ, 1.15 ಕೋಟಿ ರೂ.ನಲ್ಲಿ ಕೆರೆ ಅಭಿವೃದ್ಧಿ ನಡೆಯಲಿದೆ. ಹೀಗೆ ಒಟ್ಟು 60.90 ಕೋಟಿ ರೂ.ನಲ್ಲಿ ವಿವಿಧ ಕಾಮಗಾರಿಗಳಿಗೆ ಯೋಜನೆ ಸಿದ್ಧಪಡಿಸಲಾಗಿದೆ.
ದೇವಳ ಆವರಣ ಹಿಂಭಾಗದಲ್ಲಿರುವ ರಥ ಶೆಡ್ ಅಭಿವೃದ್ಧಿ ಆಗಬೇಕಾಗಿದೆ. ಇದು ಜಾತ್ರೆಯ ಬಳಿಕದ ಯೋಜನೆ.
ಪ್ರಶ್ನೆ: ದೇವಳ ಮುಂಭಾಗದ ರಸ್ತೆಯನ್ನು ಮುಚ್ಚಲಾಗುತ್ತದೆಯೇ?
– ಹಾಗೇನಿಲ್ಲ. ಆದರೆ ಕೊಂಬೆಟ್ಟು ಪ್ರದೇಶಕ್ಕೆ ತೆರಳುವ ದೇವಳ ಮುಂಭಾಗದ ರಸ್ತೆಗೆ ಬದಲಿಯಾಗಿ ತೋಡಿನ ಬದಿಯಿಂದಲೇ ರಸ್ತೆ ನಿರ್ಮಾಣವಾಗಲಿದೆ. ದೇವಸ್ಥಾನ ಮುಂಭಾಗದ ರಸ್ತೆಯ ಬಗ್ಗೆ ಬಳಿಕವಷ್ಟೇ ಆಲೋಚನೆ ಮಾಡಲಾಗುವುದು.
ಪ್ರಶ್ನೆ: ನೀವು ಅಧಿಕಾರ ವಹಿಸಿಕೊಂಡ ಬಳಿಕ ದೇವಸ್ಥಾನದ ಅಭಿವೃದ್ಧಿ ವಿಚಾರವಾಗಿ ಬಹಳ ವೇಗ ಸಿಕ್ಕಿದೆ ಎಂದು ಅನಿಸುತ್ತಿದೆ. ಹಾಗಾಗಿ ಮಾಸ್ಟರ್ ಪ್ಲಾನ್’ನ ಕಾಮಗಾರಿಗಳು ಪೂರ್ಣಗೊಳ್ಳಲು ಅಂತಿಮ ಗಡುವು ಇಟ್ಟುಕೊಂಡಿದ್ದೀರಾ?
– ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಮೊದಲ ಹಂತವಾಗಿ ಫೆಬ್ರವರಿ 16ರಂದು ಪ್ರಶ್ನಾಚಿಂತನೆ ನಡೆಯಲಿದೆ. ಈ ಬ್ರಹ್ಮಕಲಶೋತ್ಸವದ ರೂಪುರೇಷೆಗಳನ್ನು ಬಳಿಕವಷ್ಟೇ ಚಿಂತನೆ ಮಾಡಲಾಗುವುದು. ಈ ಬ್ರಹ್ಮಕಲಶೋತ್ಸವಕ್ಕೆ ಮೊದಲು ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂಬ ನಿರ್ಣಯ ನಮ್ಮದು.
ಪ್ರಶ್ನೆ: ದೇವಸ್ಥಾನದ ಆವರಣ ಹೊರತುಪಡಿಸಿ, ದೇವಳಕ್ಕೆ ಬೇರೆ ಜಾಗ ಇದೆಯೇ?
– ಇದರ ಬಗ್ಗೆ ಇನ್ನು ಮಾಹಿತಿ ಇಲ್ಲ. ಒಟ್ಟಿನಲ್ಲಿ ಇಲ್ಲಿನ ಕಾಮಗಾರಿಗಳು ಪೂರ್ಣಗೊಂಡ ಬಳಿಕವಷ್ಟೇ ಮುಂದಿನ ಆಲೋಚನೆ.
ಪ್ರಶ್ನೆ: ಮಾಸ್ಟರ್ ಪ್ಲಾನ್’ನ ಎಲ್ಲಾ ಕಾಮಗಾರಿಗಳು ಮುಗಿದ ಬಳಿಕ, ನಿಮ್ಮ ಕಲ್ಪನೆಯಲ್ಲಿರುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೇಗಿರಲಿದೆ?
– ಸಾನಿಧ್ಯ ವೃದ್ಧಿ ಆಗಬೇಕು ಹಾಗೂ ಭಕ್ತಾದಿಗಳು ಸಾವಕಾಶವಾಗಿ ದೇವರ ದರ್ಶನ ಪಡೆಯಬೇಕು ಎನ್ನುವುದಷ್ಟೇ ನಮ್ಮ ನಿರೀಕ್ಷೆ. ಇದಕ್ಕೆ ಪೂರಕವಾಗಿ ಎಲ್ಲಾ ಕಾರ್ಯಕ್ರಮ, ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೇವೆ. ದೇವರ ದರ್ಶನ, ಅನ್ನಪ್ರಸಾದ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೂ ನೂಕುನುಗ್ಗಲು ಆಗಬಾರದು. ವಿದ್ಯಾರ್ಥಿಗಳು ಸೇರಿದಂತೆ ನಿತ್ಯ 2 ಸಾವಿರದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ, ಪೂಜೆ ನಡೆಸಿದ ಭಕ್ತಾದಿಗಳಿಗೆ, ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗಿದೆ. ಇದರೊಂದಿಗೆ 2-3 ಕೌಂಟರ್’ಗಳು ಆಗಬೇಕಾಗಿದೆ. ದೇವಳ ರಾಜಾಂಗಣದಲ್ಲಿ ಅನ್ನಪ್ರಸಾದ ಸರತಿ ಸಾಲಿಗಾಗಿ ಹಾಕಿರುವ ಶೆಡನ್ನು ತೆರವು ಮಾಡಲಾಗುವುದು. ಅಡುಗೆ ಮನೆಯಲ್ಲಿ ಸ್ಟೀಮರ್, ಬಟ್ಟಲು ತೊಳೆಯಲು ಯಂತ್ರ ಸೇರಿದಂತೆ ಕೆಲವು ಯಂತ್ರೋಪಕರಣಗಳ ವ್ಯವಸ್ಥೆ ಮಾಡಲಾಗುವುದು.
ಪ್ರಶ್ನೆ: ವ್ಯವಸ್ಥಾಪನಾ ಸಮಿತಿಯ ನೇತೃತ್ವವನ್ನು ವಹಿಸಿಕೊಂಡು ಫೆ. 18ಕ್ಕೆ ಸರಿಯಾಗಿ ಎರಡು ತಿಂಗಳು. ಇಷ್ಟರಲ್ಲಿ ತೆರವು ಕಾರ್ಯ ಹೊರತುಪಡಿಸಿ, ಇನ್ನೇನು ಬದಲಾವಣೆಗಳನ್ನು ತಂದಿದ್ದೀರಿ?
– ಧನು ಪೂಜೆ ನಿರ್ವಹಿಸುವ ಜವಾಬ್ದಾರಿ ಮೊದಲಾಗಿ ನನಗೆ ಸಿಕ್ಕಿತು. ಧನು ಪೂಜೆ ಸಂದರ್ಭ ಭಕ್ತರ ಸಂಖ್ಯೆ ಹೆಚ್ಚಾದದ್ದರಿಂದ ಜನಜಂಗುಳಿ ಉಂಟಾಗಿತ್ತು. ಆದ್ದರಿಂದ 1.5 ಲಕ್ಷ ರೂ. ವೆಚ್ಚದ ಟಿವಿ ಪರದೆಯನ್ನು ಹಾಕಿ, ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಅನ್ನ ಪ್ರಸಾದ ನೀಡುವ ಹಾಲ್’ನಲ್ಲಿದ್ದ ಫ್ಯಾನ್’ಗಳ ರಿಪೇರಿ, ಕೈ ತೊಳೆಯಲು ಹೆಚ್ಚುವರಿ 30 ಟ್ಯಾಪ್’ಗಳನ್ನು ಅಳವಡಿಸಲಾಗಿದೆ.
ಈ ಮೊದಲು ಅನ್ನ ಪ್ರಸಾದದ ಜೊತೆಗೆ ವಾರಕ್ಕೆ ಒಂದು ದಿನ ಮಾತ್ರ ಪಾಯಸ ನೀಡಲಾಗುತ್ತಿತ್ತು. ಆದರೆ ಇದೀಗ ವಾರದ ಏಳು ದಿನವೂ ಪಾಯಸ ನೀಡುವ ವ್ಯವಸ್ಥೆ ಮಾಡಲಾಗಿದೆ.
10 ಸಾವಿರ ರೂ.ನಲ್ಲಿ ಪರಮಾನ್ನ ಸೇವೆ, 25 ಸಾವಿರ ರೂ.ನಲ್ಲಿ ಅನ್ನದಾನ ಸೇವೆ ಪ್ರಾರಂಭಿಸಲಾಗಿದೆ.
ಅನ್ನಛತ್ರದ ಹೊರಭಾಗದಲ್ಲಿ ದನಗಳು ಬಂದು ಎಂಜಲು ತಿನ್ನುತ್ತಿತ್ತು. ಇದನ್ನು ಗಮನಿಸಿ, ಗೋಗ್ರಾಸ ಸೇವೆ ಆರಂಭಿಸಲಾಗಿದೆ. ಭಕ್ತರು ದನಗಳಿಗೆ ಗೋಗ್ರಾಸ ನೀಡಲು ಅವಕಾಶವಿದೆ. ದನಗಳು ಎಂಜಲು ತಿನ್ನದಂತೆ ವ್ಯವಸ್ಥೆ ಮಾಡಲಾಗಿದೆ.
ದೇವಳದ ಒಳಭಾಗದಲ್ಲಿ “ಓಂ ನಮಃ ಶಿವಾಯ” ಎಂಬ ಮಂತ್ರೋಚ್ಛಾರ ಕೇಳಿಬರುತ್ತಿದ್ದುದನ್ನು ನೀವು ಕೇಳಿದ್ದೀರಿ. ಆದರೆ ಬಳಿಕದ ದಿನಗಳಲ್ಲಿ ಅದು ನಿಂತು ಹೋಯಿತು. ಅದನ್ನು ಮತ್ತೆ ಆರಂಭಿಸಿದ್ದೇವೆ.
ರಕ್ತೇಶ್ವರಿ ಗುಡಿಯಲ್ಲಿ ಭಕ್ತರ ಅಪೇಕ್ಷೆಯಂತೆ ಪ್ರತಿದಿನ ದೀಪ ಇಡಲಾಗುತ್ತಿದೆ.
ಇದರೊಂದಿಗೆ ಕೆಲ ಅವ್ಯವಸ್ಥೆಗಳನ್ನು ಸರಿಪಡಿಸಿದ್ದು, ದೇವಸ್ಥಾನದ ಕೈಂಕರ್ಯ ಸುಸ್ಥಿತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ.
ಪ್ರಶ್ನೆ: ಪುತ್ತೂರು ಜಾತ್ರೆ ಎಂದೇ ಖ್ಯಾತಿ ಪಡೆದ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸನಿಹ ಆಗುತ್ತಿದೆ. ಈ ವರ್ಷದ ಜಾತ್ರೆಗೆ ಹೊಸದೇನಾದರೂ ನಿರೀಕ್ಷೆ ಇಟ್ಟುಕೊಳ್ಳಬಹುದೇ?
– ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಜಾತ್ರೆ ನಡೆಯಲು ಬೇಕಾದ ವ್ಯವಸ್ಥೆ ಕಲ್ಪಿಸುವುದೇ ಮೊದಲ ಆದ್ಯತೆ. ಕರಾವಳಿಯಲ್ಲಿ ಬಹುದೊಡ್ಡ ಬೆಡಿ ಪ್ರದರ್ಶನ ಎಂಬ ಖ್ಯಾತಿ ಇರುವುದು ಕುಂಬ್ಳೆ ಬೆಡಿಗೆ. ನಂತರದ ಸ್ಥಾನ ಪುತ್ತೂರು ಬೆಡಿಗೆ. ಆದರೆ ಈ ಬಾರಿಯ ಪುತ್ತೂರು ಬೆಡಿ ಬಹಳ ವಿಶೇಷತೆಯಿಂದ ಕೂಡಿರಲಿದೆ. “ಪುತ್ತೂರ್ದ ಬೆಡಿನ್ ತೂಯರೆ ಒರ ಪೋವೊಡು” ಎಂಬಂತಾಗಬೇಕು. ಪುತ್ತೂರಿನ ಸುಡುಮದ್ದು ಪ್ರದರ್ಶನದ ವೈಭವ ಈ ಬಾರಿ ಮರುಕಳಿಸಲಿದೆ.
ಜಾತ್ರೆಯ ಸಂದರ್ಭ ನೂಕುನುಗ್ಗಲು ಆಗುವುದನ್ನು ತಡೆಯಲು ಟಿವಿ ಪರದೆ ಅಳವಡಿಸಲಾಗುವುದು. ಗದ್ದೆಯಲ್ಲಿ ರಶ್ ಆಗುವುದನ್ನು ತಡೆಯುವುದು ತೀರಾ ಅವಶ್ಯಕ. ಈ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ನೀಡಲಾಗುವ ಟೆಂಡರ್’ಗಳ ವಿಚಾರದಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ. ಇನ್ನು ದೇವಳದ ಒಳಭಾಗದಲ್ಲಿ ರಶ್ ಆಗುವುದನ್ನು ತಡೆಯಲು, ಹೊರಭಾಗದಲ್ಲಿ ಶಾಮಿಯಾನ ಹಾಕಲಾಗುವುದು. ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ಸಭೆ ಕರೆದು, ಸಲಹೆ ಪಡೆದುಕೊಳ್ಳಲಾಗುವುದು.
ಪ್ರಶ್ನೆ: ನೀವು ಸಹಕಾರಿ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದವರು. ಇದ್ದಕ್ಕಿದ್ದಂತೆ ಧಾರ್ಮಿಕ ಕ್ಷೇತ್ರದ ಜವಾಬ್ದಾರಿ ವಹಿಸಿಕೊಟ್ಟಿರುವುದರಿಂದ ಹೇಗೆ ನಿಭಾಯಿಸುತ್ತೀರಿ?
– ನನ್ನ ಉದ್ಯೋಗವೇ ಕೃಷಿ. ಇದರ ಜೊತೆ ಸಹಕಾರಿ ರಂಗದಲ್ಲಿ ಒಂದಷ್ಟು ಕೆಲಸ ನಿರ್ವಹಿಸಿದೆ. ಜೊತೆಜೊತೆಗೆ ಧಾರ್ಮಿಕ ಕ್ಷೇತ್ರದಲ್ಲೂ ಕೆಲಸ ನಿಭಾಯಿಸಿದ ಅನುಭವ ಪಡೆದುಕೊಂಡಿದ್ದೇನೆ. ಎರ್ಮಾಳು ಪಡ್ನೂರು ಶ್ರೀ ಅಶ್ವತ್ಥಕಟ್ಟೆ ದೇವತಾ ಸಮಿತಿಯ ಅಧ್ಯಕ್ಷನಾಗಿ, ಅಶ್ವತ್ಥಕಟ್ಟೆಗೆ ಉಪನಯನ – ಮದುವೆ ಮಾಡಿಸುವ ಕೆಲಸ ನಿರ್ವಹಿಸಿದ್ದೇನೆ. ಕಡವ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ – ಬ್ರಹ್ಮಕಲಶ ನಿರ್ವಹಿಸಿದ ಅನುಭವ ಇದೆ. ಕಿಲ್ಲೆ ಮೈದಾನದ ಶ್ರೀ ಮಹಾಗಣಪತಿಯ ಸೇವೆಯಲ್ಲಿ ಸದಾ ತಲ್ಲೀನನಾಗಿದ್ದೇನೆ. ಇದರೊಂದಿಗೆ, ಪಡ್ನೂರು ಧೂಮಾವತಿ ಯುವಕ ಮಂಡಲದ ಸದಸ್ಯನಾಗಿ ಸಕ್ರೀಯನಾಗಿದ್ದೇನೆ. ಇದೀಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನ ಜವಾಬ್ದಾರಿಯನ್ನು ನೀಡಿದ್ದಾರೆ. ಇದನ್ನು ಜವಾಬ್ದಾರಿಪೂರ್ವಕ ನಿರ್ವಹಿಸುತ್ತೇನೆ ಎಂಬ ವಿಶ್ವಾಸ ನನಗಿದೆ.