Gl jewellers
ಹಳ್ಳಿ ಹಳ್ಳಿಯಲ್ಲೂ ಸನಾತನ ಪರಂಪರೆಯ ಮೌಲ್ಯಗಳನ್ನು ಪ್ರತಿಪಾದಿಸುವ ‘ಹಿಂದೂ ಧಾರ್ಮಿಕ ಶಿಕ್ಷಣ’ |ಪುತ್ತೂರಿನಲ್ಲೇ ಮೊದಲ ಪ್ರಯೋಗ: ತಾಲೂಕಿನ ಮೊದಲ ಗ್ರಾಮ ಸಮಿತಿ ರಚನೆ
ಧಾರ್ಮಿಕ

ಹಳ್ಳಿ ಹಳ್ಳಿಯಲ್ಲೂ ಸನಾತನ ಪರಂಪರೆಯ ಮೌಲ್ಯಗಳನ್ನು ಪ್ರತಿಪಾದಿಸುವ ‘ಹಿಂದೂ ಧಾರ್ಮಿಕ ಶಿಕ್ಷಣ’ |ಪುತ್ತೂರಿನಲ್ಲೇ ಮೊದಲ ಪ್ರಯೋಗ: ತಾಲೂಕಿನ ಮೊದಲ ಗ್ರಾಮ ಸಮಿತಿ ರಚನೆ

ಹಿಂದೂ ಧರ್ಮದ ಆಚಾರ, ವಿಚಾರ, ಪದ್ಧತಿ, ಸಂಪ್ರದಾಯ ಮತ್ತು ಸಂಸ್ಕಾರ - ಸಂಸ್ಕೃತಿಗಳ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಂದಿನ ಹಿಂದೂ ಪೀಳಿಗೆಯನ್ನು ಧರ್ಮಜಾಗೃತರನ್ನಾಗಿ ಮಾಡುವ ಮಹಾ ಯೋಜನೆಯೊಂದು ಸದ್ದಿಲ್ಲದೆ ಕಾರ್ಯಗತಗೊಳ್ಳುತ್ತಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹಿಂದೂ ಧರ್ಮದ ಆಚಾರ, ವಿಚಾರ, ಪದ್ಧತಿ, ಸಂಪ್ರದಾಯ ಮತ್ತು ಸಂಸ್ಕಾರ – ಸಂಸ್ಕೃತಿಗಳ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಂದಿನ ಹಿಂದೂ ಪೀಳಿಗೆಯನ್ನು ಧರ್ಮಜಾಗೃತರನ್ನಾಗಿ ಮಾಡುವ ಮಹಾ ಯೋಜನೆಯೊಂದು ಸದ್ದಿಲ್ಲದೆ ಕಾರ್ಯಗತಗೊಳ್ಳುತ್ತಿದೆ.

Papemajalu garady
Karnapady garady

ಪುತ್ತೂರು ತಾಲೂಕಿನಲ್ಲಿ ಈ ಯೋಜನೆ ಆರಂಭದ ಹಂತದಲ್ಲಿದ್ದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ಮುಂದಿನ ದಿನಗಳಲ್ಲಿ ಇತರ ತಾಲೂಕುಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸುಬ್ರಹ್ಮಣ್ಯ ನಟ್ಟೋಜ ಅವರ ಆಸಕ್ತಿಯ ಕಾರಣದಿಂದ ಹುಟ್ಟಿಕೊಂಡ ಯೋಜನೆಗೆ ಪ್ರಸ್ತುತ ಹಿಂದೂ ಸಮಾಜದ ಬಹುತೇಕ ಜಾತಿ ಸಂಘಟನೆಗಳು ಕೈಜೋಡಿಸಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತದ ಪ್ರಭಾವದಿಂದ ಹೊರತಾಗಿ ಶುದ್ಧ ಸನಾತನ ಪರಂಪರೆಯ ಮೌಲ್ಯಗಳನ್ನು ಪ್ರತಿಪಾದಿಸುವ ಧಾರ್ಮಿಕ ಶಿಕ್ಷಣ ನೀಡಲು ವೇದಿಕೆ ಸಜ್ಜಾಗಿದೆ.

ಕೆದಂಬಾಡಿ ಗ್ರಾಮ ಸಮಿತಿ

ಪುತ್ತೂರು ತಾಲೂಕಿನಲ್ಲಿ ಶಾಲಾ ಮಕ್ಕಳಿಗೆ 3 ಹಂತದಲ್ಲಿ ನೀಡಲು ಉದ್ದೇಶಿಸಿರುವ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯಲ್ಲಿ  ಮಹತ್ವದ ಮೈಲುಗಲ್ಲು ಸ್ಥಾಪಿಸಲಾಗಿದೆ.

ಪ್ರತೀ ಗ್ರಾಮದಲ್ಲಿ  ರಚನೆಯಾಗಲಿರುವ ಗ್ರಾಮ ಸಮಿತಿಗೆ ಕೆದಂಬಾಡಿ ಗ್ರಾಮದಲ್ಲಿ ಚಾಲನೆ ನೀಡಲಾಗಿದ್ದು, ತಾಲೂಕಿನ ಪ್ರಥಮ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಗ್ರಾಮ ಸಮಿತಿಗಳ ರಚನೆ ನಡೆಯಲಿದೆ.

ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಹಿಂದೂ ಧಾರ್ಮಿಕ ಶಿಕ್ಷಣಕ್ಕೆ ಶೃಂಗೇರಿ ಮಠದಿಂದಲೇ ಪಠ್ಯ ಪುಸ್ತಕ ಮತ್ತು ಶಿಕ್ಷಕ ತರಬೇತಿ ಕಾರ್ಯ ನಡೆಯಲಿದ್ದು ಇದನ್ನು ಅನುಷ್ಠಾನಗೊಳಿಸಲು ಪುತ್ತೂರು ತಾಲೂಕು ಮಟ್ಟದ ಮೇಲುಸ್ತುವಾರಿ ಸಮಿತಿ ರಚನೆಯಾಗುತ್ತಿದೆ. ಇದೇ ವೇಳೆ ಪ್ರತೀ ಗ್ರಾಮ ಮಟ್ಟದಲ್ಲೂ ಸಮಿತಿ ರಚನೆಗೆ ಚಾಲನೆ ನೀಡಲಾಗಿದೆ.

ಕೆದಂಬಾಡಿಯಲ್ಲಿ ಪ್ರಥಮ ಪ್ರಯೋಗ:

ಕೆದಂಬಾಡಿ ಗ್ರಾಮದಲ್ಲಿ ತಾಲೂಕಿನ ಮೊದಲ ಗ್ರಾಮ ಸಮಿತಿ ಭಾನುವಾರ ರಚನೆಯಾಗಿದೆ. ತಿಂಗಳಾಡಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ನಡೆದ ಧರ್ಮಾಭಿಮಾನಿಗಳ ಸಭೆಯಲ್ಲಿ ಗ್ರಾಮ ಸಮಿತಿ ರಚಿಸಿ ಹಿಂದೂ ಧಾರ್ಮಿಕ ಶಿಕ್ಷಣವನ್ನು ಗ್ರಾಮದ ಮಕ್ಕಳಿಗೆ ನೀಡಲು ನಿರ್ಧರಿಸಲಾಯಿತು.

ದೇವತಾ ಭಜನಾ ಮಂದಿರದ ಅಧ್ಯಕ್ಷರಾದ ಜಯರಾಮ ರೈ ಮಿತ್ರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ರೈ ಕೆದಂಬಾಡಿಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂ ಧರ್ಮದಲ್ಲಿ ಉದಾತ್ತ ಸಂಸ್ಕೃತಿ, ಆಚಾರ ವಿಚಾರ, ನಂಬಿಕೆ, ಪದ್ಧತಿ, ಧಾರ್ಮಿಕ ಅಂಶಗಳಿದ್ದರೂ, ಇವುಗಳನ್ನು ನಮ್ಮ ಮಕ್ಕಳಿಗೆ ವ್ಯವಸ್ಥಿತವಾಗಿ ಕಲಿಸುವ ಮಾಧ್ಯಮವಿಲ್ಲದ ಕಾರಣ  ಹಿಂದೂ ಮಕ್ಕಳು ಆಧುನಿಕತೆಯ ಸೆಳೆತಕ್ಕೆ ಸಿಕ್ಕಿ ಧರ್ಮದಿಂದ ದೂರವಾಗುತ್ತಿದ್ದಾರೆ. ಇದರ ಪ್ರಯೋಜನ ಇತರರು ಪಡೆಯುವಂತಾಗಿದೆ. ಇದನ್ನು ತಪ್ಪಿಸಿ ಹಿಂದೂ ಮಕ್ಕಳನ್ನು ಸುಸಂಸ್ಕೃತರನಗ್ನಾಗಿ ಮಾಡುವುದೇ ಧಾರ್ಮಿಕ ಶಿಕ್ಷಣದ ಗುರಿ ಎಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಧಾರ್ಮಿಕ ಶಿಕ್ಷಣ ನೀಡಲು ಶೃಂಗೇರಿ ಮಠದ ಗುರುಗಳೇ ಮುಂದೆ ನಿಂತಿರುವುದು ನಮ್ಮ ಸೌಭಾಗ್ಯ. ಪ್ರತೀ ಗ್ರಾಮದಲ್ಲಿ ಅಗತ್ಯ ಶಿಕ್ಷಕರನ್ನು ನೇಮಿಸಿ, ವಾರದಲ್ಲಿ ಕನಿಷ್ಠ ಒಂದು ತರಗತಿ ನೀಡಬೇಕು. ಗ್ರಾಮಸ್ಥರ ದೇಣಿಗೆಯಿಂದಲೇ ಶಿಕ್ಷಕರಿಗೆ ಗೌರವಧನ ನೀಡಬಹುದಾಗಿದೆ. ಭವಿಷ್ಯದ ಹಿಂದೂ ಸಮಾಜವನ್ನು ಸುಸಂಸ್ಕೃತಗೊಳಿಸುವು ಯೋಜನೆ ಇದು ಎಂದರು.

ಯುಗಾದಿಯಂದ ತರಗತಿ ಆರಂಭ

* ಈ ವರ್ಷದ ಯುಗಾದಿಯಿಂದಲೇ ತಾಲೂಕಿನ ಎಲ್ಲ ಗ್ರಾಮಗಳ ಶ್ರದ್ಧಾ ಕೇಂದ್ರವನ್ನು ಕೇಂದ್ರವಾಗಿಟ್ಟುಕೊಂಡು ಏಕ ಕಾಲದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಆರಂಭಿಸಲಾಗುತ್ತದೆ.

* 1ರಿಂದ 4ನೇ ತರಗತಿ, 5ರಿಂದ 8ನೇ ತರಗತಿ ಮತ್ತು 9ರಿಂದ ದ್ವಿತೀಯ ಪಿಯುಸಿ- ಹೀಗೆ 3 ಹಂತದಲ್ಲಿ ಧಾರ್ಮಿಕ ಶಿಕ್ಷಣ ನಡೆಯಲಿದ್ದು, ಇದಕ್ಕಾಗಿ 3 ಹಂತದ ಪಠ್ಯ ಪುಸ್ತಕ ಶೃಂಗೇರಿ ಮಠದಿಂದ ಸಿಗಲಿದೆ.

* ಗ್ರಾಮ ಮಟ್ಟದಲ್ಲಿ ನೇಮಕಗೊಳ್ಳುವ ಶಿಕ್ಷಕರಿಗೆ ಶೃಂಗೇರಿಯದಲೇ ತರಬೇತಿ ನೀಡಲಾಗುತ್ತದೆ.

* ತಾಲೂಕಿನ ಗ್ರಾಮಗಳಲ್ಲಿ ಗ್ರಾಮ ಸಮಿತಿ ರಚನೆಯಾಗುತ್ತಿದ್ದು, ಜ.26ರಂದು ತಾಲೂಕು ಮೇಲುಸ್ತುವಾರಿ ಸಮಿತಿ ಸಭೆ ಪುತ್ತೂರಿನಲ್ಲಿ ನಡೆಯಲಿದೆ.

ಹೇಗಿದೆ ಶಿಕ್ಷಣ ಯೋಜನೆ?:

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಈ ಸಂಬಂಧ ಪೂರ್ವಸಿದ್ಧತಾ ಸಭೆ ನಡೆದಿದೆ. ಸುಮಾರು 26 ಜಾತಿ ಸಂಘಟನೆಗಳ ಪ್ರಮುಖರು ಪೂರಕವಾಗಿ ಸ್ಪಂದಿಸಿದ್ದಾರೆ. ತಾಲೂಕು ಕೇಂದ್ರ ಮತ್ತು ಗ್ರಾಮ ಕೇಂದ್ರಗಳಲ್ಲಿ ಉಪ ಸಮಿತಿ ರಚಿಸಲು ನಿರ್ಧರಿಸಲಾಗದೆ. ಆಯಾ ಸಮಿತಿಗಳೇ ನೇತೃತ್ವ ವಹಿಸಿಕೊಂಡು ಗ್ರಾಮಗಳ ಶ್ರದ್ಧಾ ಕೇಂದ್ರದಲ್ಲಿ  ವಾರದಲ್ಲಿ ಒಂದು ದಿನ ನಿರ್ದಿಷ್ಟ ಅವಧಿಯ ಧಾರ್ಮಿಕ ಶಿಕ್ಷಣ ತರಗತಿ ನಡೆಸಲಾಗುತ್ತದೆ. ತರಬೇತಿ ಪಡೆದ ಶಿಕ್ಷಕರು ಬಂದು ಪಠ್ಯ ಆಧರಿತವಾಗಿ ಪಾಠ ಮಾಡುತ್ತಾರೆ.

ಈ ತರಗತಿಗಳಲ್ಲಿ ಆಯಾ ಗ್ರಾಮಗಳ ಮಕ್ಕಳು ಭಾಗವಹಿಸುವಂತೆ ಮಾಡುವ ಹೊಣೆ ಸ್ಥಳೀಯ ಸಮಿತಿಗಳದ್ದಾಗಿದೆ. ಶಿಕ್ಷಕರಿಗೆ ನೀಡುವ ಗೌರವಧನವನ್ನು ದೇಣಿಗೆ ಮತ್ತಿತರ ಮೂಲಗಳಿಂದ ಸಂಗ್ರಹಿಸುವ ಹೊಣೆಯೂ ಸಮಿತಿಯದ್ದಾಗಿದೆ. ತಾಲೂಕು ಮಟ್ಟದಲ್ಲಿ ಪ್ರಾಜ್ಞರು, ವಿದ್ವಾಂಸರು ಮತ್ತು ಸಮುದಾಯ ಸಂಘಟನೆಗಳ ಮುಖಂಡರನ್ನು ಒಳಗೊಂಡ ಮೇಲುಸ್ತುವಾರಿ ಸಮಿತಿ ಇರಲಿದ್ದು, ಒಟ್ಟಾರೆ ಧಾರ್ಮಿಕ ಶಿಕ್ಷಣ ಯೋಜನೆ ಸಾಗುವ ರೀತಿಯಲ್ಲಿ  ಕಾಲಕಾಲಕ್ಕೆ ಪರಾಮರ್ಶೆ ಮಾಡುತ್ತದೆ.

ಎರಡನೇ ಪ್ರಯೋಗ:

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಹಿಂದಿನ ವ್ಯವಸ್ಥಾಪನಾ ಸಮಿತಿಯ ಅವಧಿಯಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಯೋಜನೆ ಜಾರಿಗೊಳಿಸಲಾಗಿತ್ತು ದೇವಳದ ವತಿಯಿಂದಲೇ ಇದು ಜಾರಿಯಾಗಿತ್ತು. ಪ್ರಸ್ತುತ ಕೈಗೊಳ್ಳಲಾದ ಯೋಜನೆ ಹೆಚ್ಚು ಆಳ ಮತ್ತು ಹರಿವನ್ನು ಹೊಂದಿರುವ ಸರ್ವವ್ಯಾಪಿ ಅಭಿಯಾನವಾಗಿದೆ.

ಅಧ್ಯಕ್ಷರಾಗಿ ತಾರಾ ಬಳ್ಳಾಲ್ ಆಯ್ಕೆ

ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ತಾರಾ ಬಳ್ಳಾಲ್ ಬೀಡು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಸುಜಾತಾ ಮುಳಿಗದ್ದೆö, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಮತ್ತು ಸೂರ್ಯಪ್ರಸನ್ನ ರೈö, ಕೋಶಾಧಿಕಾರಿಯಾಗಿ ವರುಣ್ ತಿಂಗಳಾಡಿ, ಸಂಚಾಲಕರಾಗಿ ಸೀತಾರಾಮ ರೈ ಕೆದಂಬಾಡಿಗುತ್ತು, ಸಹ ಸಂಚಾಲಕರಾಗಿ ಮೋಹನ್ ಶೆಟ್ಟಿ ಮಜಲಮೂಲೆ, ಗಂಗಾಧರ ಮುಳಿಗದ್ದೆ,  ಗೌರವಾಧ್ಯಕ್ಷರಾಗಿ ಉಂಡೆಮನೆ ಶ್ರೀಕೃಷ್ಣ ಭಟ್, ಮಿತ್ರಂಪಾಡಿ ಜಯರಾಮ ರೈ, ಸುಭಾಷ್ ರೈ ಕಡಮಜಲು, ರಾಮಯ್ಯ ರೈ ತಿಂಗಳಾಡಿ, ಕೃಷ್ಣ ಕುಮಾರ್ ರೈ ಕೆದಂಬಾಡಿ ಗುತ್ತು,  ಗೌರವ ಸಲಹೆಗಾರರಾಗಿ ಮಾದೋಡಿ ಭಾಸ್ಕರ ರೈ ನಂಜೆ, ಭಾಸ್ಕರ ಬಳ್ಳಾಲ್ ಕೆದಂಬಾಡಿ ಬೀಡು, ಜಯಾನಂದ ರೈ ಮಿತ್ರಂಪಾಡಿ, ಉಮೇಶ್ ರೈ ಮಿತ್ತೋಡಿ ಆಯ್ಕೆಯಾದರು.

ಶೃಂಗೇರಿ ಸ್ವಾಮೀಜಿ ಅನುಗ್ರಹ

ಆದಿ ಶಂಕಾರಾಚಾರ್ಯರಿಂದ ಸ್ಥಾಪನೆಗೊಂಡ ಶೃಂಗೇರಿ ಶಾರದಾ ಪೀಠದ  ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಅವರ ಅನುಗ್ರಹ ಮತ್ತು ಮಾರ್ಗದರ್ಶನ ಈ ಹಿಂದೂ ಧಾರ್ಮಿಕ ಶಿಕ್ಷಣಕ್ಕಿದೆ. ಧಾರ್ಮಿಕ ಶಿಕ್ಷಣಕ್ಕೆ ಬೇಕಾದ ಪಠ್ಯವನ್ನು ಶೃಂಗೇರಿಯಿಂದಲೇ ತಯಾರಿಸಿ ಪೂರೈಸಲಾಗುತ್ತದೆ. ಧಾರ್ಮಿಕ ಶಿಕ್ಷಣ ನೀಡುವ ಶಕ್ಷಕರಿಗೆ ಶೃಂಗೇರಿಯಿಂದಲೇ ತರಬೇತಿ ನೀಡಲಾಗುತ್ತದೆ. ಧಾರ್ಮಿಕ ಶಿಕ್ಷಣ ಪೂರ್ತಿ ಚೌಕಟ್ಟು ಶೃಂಗೇರಿ ಪೀಠದ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ.

ಸಮಾಜವೇ ಕೊಂಡೊಯ್ಯಲಿದೆ..

ಇವತ್ತು ಅನೇಕ ಧರ್ಮಗಳಲ್ಲಿ ಧಾರ್ಮಿಕ ಶಿಕ್ಷಣ ಮಕ್ಕಳಿಗೆ ಸಿಗುತ್ತಿದೆ. ಅವರವರ ಧರ್ಮದ ತಿರುಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ  ಆಳವಾದ ಜ್ಞಾನ ಸಂಪತ್ತು, ಶ್ರೇಷ್ಠ ಪರಂಪರೆ, ಉತ್ಕೃಷ್ಟ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳಿದ್ದರೂ ಅದನ್ನು ಮಕ್ಕಳಿಗೆ ವ್ಯವಸ್ಥಿತವಾಗಿ ಕಲಿಸುವ ಕ್ರಮವಿಲ್ಲ ಈ ಕೊರತೆ ನೀಗಿಸಲು ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಪುತ್ತೂರು ತಾಲೂಕಿನಲ್ಲಿ ಧಾರ್ಮಿಕ ಶಿಕ್ಷಣ ಆರಂಭವಾಗಲಿದೆ. ಇದು ಇಡೀ ಸಮಾಜಕ್ಕಾಗಿರುವ ಯೋಜನೆಯಾದ ಕಾರಣ ಹಿಂದೂ ಸಮಾಜವೇ ಮುಂದಕ್ಕೆ ಕೊಂಡೊಯ್ಯಲಿದೆ.

ಸುಬ್ರಹ್ಮಣ್ಯ ನಟ್ಟೋಜ, ಮುಖ್ಯಸ್ಥರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts