ಪುತ್ತೂರು: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ.) ಕರ್ನಾಟಕ, ನೇತ್ರಾವತಿ ವಲಯ, ಪುತ್ತೂರು ಇದರ ಆಶ್ರಯದಲ್ಲಿ ಹಾಗೂ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಜಾಗರಣೆ, ಭಜನೆ ಹಾಗೂ ಸಾಮೂಹಿಕ ಯೋಗ ಶಿವ ನಮಸ್ಕಾರ ಕಾರ್ಯಕ್ರಮ ನಡೆಯಿತು.ಫೆಬ್ರವರಿ 15ರಂದು ಸಂಜೆ 6.00 ಗಂಟೆಯಿಂದ ಆರಂಭಗೊಂಡ ಈ ಕಾರ್ಯಕ್ರಮವು ಫೆಬ್ರವರಿ 16ರಂದು ಮುಂಜಾನೆಯವರೆಗೆ ನಡೆಯಿತು. ಈ ಸಂದರ್ಭದಲ್ಲಿ ಜಾಗರಣೆ, ಭಜನೆ, ಶಿವ ಪಂಚಾಕ್ಷರಿ ಜಪ, ಶಿವಾಷ್ಠೋತ್ತರ ಶತನಾಮ ಪಠಣ, ಪುಷ್ಪಾರ್ಚನೆ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ಹಾಗೂ ಸದಸ್ಯ ಸುಭಾಷ್ ರೈ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಸಂಘಟನಾ ಪ್ರಮುಖ ಹರಿಪ್ರಸಾದ್, ಕಾರ್ಯಕ್ರಮದ ಮಾರ್ಗದರ್ಶಕಿ ಶಶಿಕಲಾ, ಸಂಚಾಲಕ ರಾಜೇಶ್ ನಾರಾವಿ ಹಾಗೂ ಸಹ ಸಂಚಾಲಕಿ ವಿನಯ ಪೈ ಉಪಸ್ಥಿತರಿದ್ದರು.
ಬೌದ್ಧಿಕ್ ಹಾಗೂ ಮಂತ್ರಪಠಣವನ್ನು ಶಿಕ್ಷಕರಾದ ಅಶ್ವಿನಿ, ರಾಜಗೋಪಾಲ್, ಯತೀಶ ದೇವ, ಜಯಶೀಲ, ಶುಭ ರೈ ಹಾಗೂ ಚಂದ್ರಾವತಿ ನಡೆಸಿಕೊಟ್ಟರು. ಬಳಿಕ ಕುಣಿತ ಭಜನೆ ನಡೆಯಿತು.ಈ ಸಂದರ್ಭದಲ್ಲಿ 108 ಬಾರಿ ಮೃತ್ಯುಂಜಯ ಜಪ, 1,008 ಬಾರಿ ಶಿವ ಪಂಚಾಕ್ಷರಿ ಜಪ, ಶಿವಾಷ್ಟೋತ್ತರ ಶತನಾಮ ಪಠಣೆ ಹಾಗೂ ಬಿಲ್ವಪತ್ರ ಅರ್ಚನೆ ನೆರವೇರಿಸಲಾಯಿತು. ಜಾಗರಣೆಗೆ ಆಗಮಿಸಿದ್ದ ಯೋಗಬಂದುಗಳು 108 ಪ್ರದಕ್ಷಿಣೆ ಸಲ್ಲಿಸಿ ಶಿವಲಿಂಗಕ್ಕೆ ಬಿಲ್ವಪತ್ರೆ ಹಾಗೂ ಎಕ್ಕದ ಹೂವನ್ನು ಅರ್ಪಿಸಿದರು. ಒಟ್ಟು 90 ಯೋಗಬಂದುಗಳು ಶಿವರಾತ್ರಿ ಜಾಗರಣೆಯಲ್ಲಿ ಭಾಗವಹಿಸಿದರು.

ಮುಂಜಾನೆ 4.00 ಗಂಟೆಯಿಂದ ಲಿಂಗಾಷ್ಠಕಂ ಸ್ತೋತ್ರ, ಅಮೃತವಚನ ಹಾಗೂ ಪಂಚಾಂಗ ಪಠಣದೊಂದಿಗೆ ಸಾಮೂಹಿಕ ಯೋಗ ಶಿವ ನಮಸ್ಕಾರ ಕಾರ್ಯಕ್ರಮ ಆರಂಭವಾಯಿತು. ಹೇಮಚಂದ್ರ ಮಾನಸಿಕ ಸಿದ್ಧತೆ ಹಾಗೂ ಉಸಿರಾಟ ಕ್ರಿಯೆಗಳನ್ನು ನಡೆಸಿಕೊಟ್ಟರೆ, ಶಿವ ನಮಸ್ಕಾರದ ಮಹತ್ವವನ್ನು ಸವಿತ ತಿಳಿಸಿಕೊಟ್ಟರು.ಶಿವ ನಮಸ್ಕಾರದ ಮೂರು ಆವೃತ್ತಿಗಳನ್ನು ರಮ್ಯ, ಹರ್ಷಿತ್, ಚೇತನ ಹಾಗೂ ಸತೀಶ್ ನಡೆಸಿಕೊಟ್ಟರು. ಅಮೃತಾಸನವನ್ನು ಭವ್ಯ ನಡೆಸಿಕೊಟ್ಟರು. ರಾಜೇಶ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.ಪುತ್ತೂರು ತಾಲೂಕಿನ ಸುಮಾರು 257 ಯೋಗಬಂದುಗಳು ಸಾಮೂಹಿಕ ಯೋಗ ಶಿವ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



















