Friday, November 22
Share News

ಗ್ರಾಹಕರು ಸಾಲ ವಾಪಸ್ ಮಾಡದಿದ್ದರೆ ಅವರು ಅಡ ಇಟ್ಟ ವಸ್ತುವನ್ನು ಬ್ಯಾಂಕ್ ಹರಾಜಿಗೆ ಹಾಕುವುದು ಸಾಮಾನ್ಯವಾಗಿ ಇರುವ ಪ್ರಕ್ರಿಯೆ. ಆದರೆ, ತಮಿಳುನಾಡಿನ ಖಾಸಗಿ ಬ್ಯಾಂಕ್ನಲ್ಲಿ ಬೇರೆಯೇ ಘಟನೆ ನಡೆದಿದೆ.

ಗ್ರಾಹಕನೊಬ್ಬ ಸಾಲ ವಾಪಸ್ ಮಾಡಲಿಲ್ಲವೆಂದು ಬ್ಯಾಂಕ್ ಉದ್ಯೋಗಿ ಆತನ ಹೆಂಡತಿಯನ್ನೇ ಅಡವಾಗಿ ಇಟ್ಟುಕೊಂಡ ಘಟನೆ ಬೆಳಕಿಗೆ ಬಂದಿದೆ.

ಸೇಲಂನ ವಳಪ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ದಿ ಕಮ್ಯೂನ್ ಮ್ಯಾಗಝಿನ್ನಲ್ಲಿ ವರದಿಯಾಗಿದೆ.

ಖಾಸಗಿ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದ ಕೂಲಿ ಕಾರ್ಮಿಕ ಸಾಲದ ಕಂತು ಕಟ್ಟಿರಲಿಲ್ಲ. ಈ ಸಂದರ್ಭದಲ್ಲಿ ಬ್ಯಾಂಕ್ನ ಉದ್ಯೋಗಿ ಆ ಕೂಲಿಯ ಮನೆಗೆ ಹೋಗಿ ಆತನ ಹೆಂಡತಿಯನ್ನು ಬ್ಯಾಂಕ್ಗೆ ಕರೆದೊಯ್ಯುತ್ತಾನೆ. ಸಾಲದ ಕಂತು ಕಟ್ಟಿದ ಬಳಿಕವಷ್ಟೇ ಹೆಂಡತಿಯನ್ನು ಬ್ಯಾಂಕ್ನಿಂದ ಆಚೆಗೆ ಕಳುಹಿಸಲಾಗಿದೆ. ವಳಪ್ಪಾಡಿಯಲ್ಲಿರುವ ಐಡಿಎಫ್ಸಿ ಫಸ್ಟ್ ಭಾರತ್ ಬ್ಯಾಂಕ್ನಲ್ಲಿ ಈ ಘಟನೆ ಆಗಿರುವುದು ಗೊತ್ತಾಗಿದೆ.

ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ ಸಂಜೆ 7.30ರವರೆಗೂ ಆ ಮಹಿಳೆಯನ್ನು ಬ್ಯಾಂಕ್ನಲ್ಲಿ ಇರಿಸಲಾಗಿತ್ತು. ಸಾಲ ಪಡೆದ ವ್ಯಕ್ತಿ 27 ವರ್ಷದ ಪ್ರಶಾಂತ್ ಎನ್ನಲಾಗಿದ್ದು, ಈತ ವಳಪ್ಪಾಡಿ ಬಳಿಯ ತುಕ್ಕಿಯಂಪಾಳಯಂ ನಿವಾಸಿ. ಪ್ರಶಾಂತ್ ನಾಲ್ಕು ತಿಂಗಳ ಹಿಂದೆ ಈ ಬ್ಯಾಂಕ್ನಿಂದ 35,000 ರೂ ಸಾಲ ಪಡೆದುಕೊಂಡಿರುತ್ತಾನೆ. ವಾರಕ್ಕೆ 770 ರೂನಂತೆ 52 ಕಂತುಗಳಲ್ಲಿ ಸಾಲ ಮರುಪಾವತಿಗೆ ಒಪ್ಪಂದ ಆಗಿರುತ್ತದೆ. ಇನ್ನು ಕೇವಲ 10 ವಾರದ ಕಂತು ಮಾತ್ರವೇ ಬಾಕಿ ಇತ್ತು ಎನ್ನಲಾಗಿದೆ.

ವರದಿ ಪ್ರಕಾರ ಶುಭಾ ಎನ್ನುವ ಬ್ಯಾಂಕ್ ಉದ್ಯೋಗಿ ಏಪ್ರಿಲ್ 30ರಂದು ಸಾಲದ ವಿಚಾರವಾಗಿ ಪ್ರಶಾಂತ್ಗೆ ಫೋನ್ ಮಾಡಿದ್ದಾಳೆ. ಫೋನ್ ಎತ್ತದಾಗ ಆತನ ಮನೆಗೆ ಹೋಗಿದ್ದಾಳೆ. ಇಲ್ಲಿ ಪ್ರಶಾಂತ್ ಇರಲಿಲ್ಲ. ಆತನ ಹೆಂಡತಿ ಗೌರಿ ಶಂಕರಿಯನ್ನು ಬ್ಯಾಂಕ್ ಕಚೇರಿಗೆ ಕರೆ ತರುತ್ತಾಳೆ. ಪ್ರಶಾಂತ್ ಬಂದು ಸಾಲದ ಕಂತು ಕಟ್ಟುವವರೆಗೂ ಆಕೆಯನ್ನು ಕಚೇರಿಯಲ್ಲೇ ಇರಿಸಲಾಗುತ್ತದೆ.

ಹೆಂಡತಿಯನ್ನು ಬ್ಯಾಂಕ್ ಕಚೇರಿಯಲ್ಲಿ ಬಲವಂತವಾಗಿ ಕೂಡಿಡಲಾಗಿರುವ ವಿಚಾರ ತಿಳಿದ ಬಳಿಕ ಪ್ರಶಾಂತ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಆರ್ಬಿಐ ನಿಯಮದ ಪ್ರಕಾರ ಸಂಜೆ 6 ಗಂಟೆಯ ಬಳಿಕ ಗ್ರಾಹಕರಿಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡಬಾರದು. ಐಡಿಎಫ್ಸಿ ಫಸ್ಟ್ನ ಆ ಕಚೇರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಕೇಳಿರುವುದು ವರದಿಯಾಗಿದೆ.


Share News

Comments are closed.

Exit mobile version