ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್‌ನ ಎಡಕುಮೇರಿ ಕಡಗರವಳ್ಳಿ ಮಧ್ಯೆ ಭೂಕುಸಿತದಿಂದಾಗಿ 14 ರೈಲುಗಳ ಸಂಚಾರ ರದ್ದಾಗಿದೆ. ಹಳಿ ದುರಸ್ತಿ ಕಾರ್ಯ ಮುಂದುವರಿದಿದ್ದು, ಭಾರಿ ಮಳೆಯಿಂದಾಗಿ ಪುನಃಸ್ಥಾಪನೆ ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಆಗಸ್ಟ್ 10ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಕೆಎಸ್‌ಆರ್ ಬೆಂಗಳೂರು-ಕಣ್ಣೂರು ರೈಲು ಸಂಖ್ಯೆ (16511) ರೈಲು, ಬೆಂಗಳೂರು-ಕಾರವಾರ ಕೆಎಸ್‌ಆರ್ ಎಕ್ಸ್‌ಪ್ರೆಸ್ (16595), ಕಣ್ಣೂರು-ಬೆಂಗಳೂರು (16512) ರೈಲು, ಕಾರವಾರ-ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16596) ರೈಲು, ಬೆಂಗಳೂರು-ಮುರುಡೇಶ್ವರ (16585) ರೈಲು, ಮುರ್ಡೇಶ್ವರ- ಬೆಂಗಳೂರು (16586) ರೈಲನ್ನು ರದ್ದುಗೊಳಿಸಲಾಗಿದೆ. ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ (07377) ರೈಲು, ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್ -ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (07378) ರೈಲು ಸಂಚಾರ ರದ್ದಾಗಿವೆ.
ಹಳಿಯ ಕೆಳಭಾಗದಲ್ಲಿ ಮಣ್ಣು ಭಾರಿ ಆಳಕ್ಕೆ ಕುಸಿದಿದ್ದು, ಹಳಿಗೆ ಅಪಾಯ ಎದುರಾಗಿದೆ. ರೈಲ್ವೆ ಸಿಬ್ಬಂದಿ ಹಗಲಿರುಳು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯುತ್ತಿರುವ ಜಡಿಮಳೆ ಅಡ್ಡಿಯಾಗಿದೆ. ಶುಕ್ರವಾರ ಸಂಜೆ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಶನಿವಾರ ಹಾಗೂ ಭಾನುವಾರ ಕೂಡ ಹಲವು ರೈಲುಗಳ ಸಂಚಾರ ರದ್ದಾಗಿದ್ದು, ಕೆಲವು ರೈಲುಗಳನ್ನು ಮಾರ್ಗ ಬದಲಾಯಿಸಿ ಕಳುಹಿಸಲಾಗಿವೆ.
ವಿಭಾಗೀಯ ರೈಲ್ವೆ ನಿರ್ವಾಹಕಿ (ಡಿಆರ್ಎಂ) ಶಿಲ್ಪಿ ಅಗರ್ವಾಲ್ ಮತ್ತು ಹಿರಿಯ ಅಧಿಕಾರಿಗಳು ಎಡಕುಮಾರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ನಡೆಯುತ್ತಿರುವ ಪುನಃಸ್ಥಾಪನೆ ಕಾರ್ಯವನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಟ್ರ್ಯಾಕ್ ಮರುಸ್ಥಾಪಿಸಲು ಪ್ರಗತಿ ಸಾಧಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದೆ.
ಹಗಲು ರಾತ್ರಿ ನಿರಂತರ ಕೆಲಸ ಮಾಡಿದರೂ ರೈಲು ಮಾರ್ಗವನ್ನು ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗಿದೆ. ಈ ಪ್ರದೇಶಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ, ದುರಸ್ತಿಗೆ ಬೇಕಾದ ಎಲ್ಲ ವಸ್ತುಗಳನ್ನು ರೈಲಿನ ವ್ಯಾಗನ್ ಮೂಲಕವೇ ತರಬೇಕಾಗುತ್ತದೆ. ಇದೂ ಸಹ ಕಾಮಗಾರಿಗೆ ಅಡ್ಡಿಯಾಗಿದೆ.
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಹಳಿಯ ಕೆಳಭಾಗದಲ್ಲಿ ಸ್ಥಿರತೆ ಇಲ್ಲದೆ ಹಳಿ ಬಾಗುವ, ಹಾನಿಗೊಳ್ಳುವ ಅಪಾಯವೂ ಇದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ಪ್ರಸ್ತುತ ಸುಮಾರು 750ಕ್ಕೂ ಅಧಿಕ ಮಂದಿ ಕಾಮಗಾರಿ ನಡೆಸುತ್ತಿದ್ದಾರೆ.