ರಾಜಕೀಯ

ನಾರಾಯಣ ಸ್ವಾಮಿ ವಿರುದ್ಧದ ಟೀಕೆ ರಾಜಕೀಯ ಹೇಳಿಕೆಯೇ ಹೊರತು, ದಲಿತ ನಿಂದನೆಯಲ್ಲ! ಶಾಸಕ ಅಶೋಕ್ ಕುಮಾರ್ ರೈಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಎಸ್.ಸಿ. ಘಟಕ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಾಯಿಗಳು ಒಳ್ಳೆಯವರನ್ನು ಕಂಡರೂ ಬೊಗಳುತ್ತವೆ. ಕೆಟ್ಟವರನ್ನು ಕಂಡರೂ ಬೊಗಳುತ್ತವೆ. ಅದಕ್ಕೆ ಉತ್ತರ ನೀಡಬೇಕಾಗಿಲ್ಲ. ನಾರಾಯಣ ಸ್ವಾಮಿ ಅವರು ನಾಲಾಯಕ್ ಸ್ವಾಮಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದರು. ಇದೊಂದು ರಾಜಕೀಯ ಹೇಳಿಕೆ. ಇಲ್ಲಿ ಎಲ್ಲೂ ದಲಿತ ಸಮುದಾಯದ ಹೆಸರು ಉಲ್ಲೇಖವಾಗಿಲ್ಲ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಬಾಬು ಮರಿಕೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಉಪ್ಪಿನಂಗಡಿಯಲ್ಲಿ ಶಾಸಕ ಅಶೋಕ್ ರೈ ವಿರುದ್ಧ ರಾಜಕೀಯ ಹೇಳಿಕೆ ನೀಡಿ ಲೇವಡಿ ಮಾಡಿದ್ದರು. ಇದಕ್ಕೆ ಶಾಸಕರು ಕೂಡ ರಾಜಕೀಯ ಹೇಳಿಕೆ ಮೂಲಕ ಪ್ರತ್ಯುತ್ತರ ನೀಡಿದ್ದಾರೆಯೇ ಹೊರತು ಎಲ್ಲೂ ಕೂಡ ಅವರು ದಲಿತ ಸಮುದಾಯವನ್ನು ನಿಂದಿಸುವ ಹೇಳಿಕೆ ನೀಡಿಲ್ಲ. ಅಶೋಕ್ ರೈ ಅವರು ತಮ್ಮ ಮಾತಿನಲ್ಲಿ ಎಲ್ಲೂ ದಲಿತ ಶಬ್ದದ ಉಲ್ಲೇಖ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ನಾರಾಯಣ ಸ್ವಾಮಿ ಪ್ರತಿಪಕ್ಷದ ನಾಯಕ ಎಂಬ ಕಾರಣಕ್ಕೆ ಅವರನ್ನು ಪುತ್ತೂರಿನ ಬಿಜೆಪಿಗರು ಭಾಷಣ ಮಾಡಲು ಕರೆದಿದ್ದಾರೇ ಹೊರತು ದಲಿತ ಮುಖಂಡ ಎಂಬ ಕಾರಣಕ್ಕಲ್ಲ. ಅದೇ ರೀತಿ ತಮ್ಮ ವಿರುದ್ಧ ಮಾತನಾಡಿದ ಕಾರಣ ಶಾಸಕರು ಕೂಡ ರಾಜಕೀಯ ಉತ್ತರ ನೀಡಿದ್ದಾರೆ. ಅವರು ಎಲ್ಲಿಯೂ ದಲಿತ ಶಬ್ದ ಉಲ್ಲೇಖ ಮಾಡಿಲ್ಲ ಎಂದರು.

ಬಿಜೆಪಿ ನಾಯಕರು ಅಗನತ್ಯ ವಿವಾದ ಸೃಷ್ಟಿಸಲು ಯತ್ನಿಸಿದ್ದಾರೆ. ದಲಿತರನ್ನು ಶಾಸಕರ ವಿರುದ್ಧ ಎತ್ತಿಕಟ್ಟಲು ವಿಫಲ ಯತ್ನ ನಡೆಸಿದ್ದಾರೆ. ಆದರೆ ಪುತ್ತೂರು ಕ್ಷೇತ್ರದ ದಲಿತ ಸಮಾಜ ಶಾಸಕರ ಜತೆಯಲ್ಲಿದೆ. ದಲಿತರ ಹೆಸರು ಬಳಸಿಕೊಂಡು ಬಿಜೆಪಿ ನಾಯಕರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಬಾಬು ಮರಿಕೆ ಹೇಳಿದರು.

ಒಂದು ವೇಳೆ ಶಾಸಕರು ತಮ್ಮ ಮಾತಿನಲ್ಲಿ ದಲಿತರನ್ನು ನಿಂದಿಸುತ್ತಿದ್ದರೆ ನಾವು ಕೂಡ ಅದರ ಬಗ್ಗೆ ಮಾತನಾಡುತ್ತಿದ್ದೆವು. ಅಂಬೇಡ್ಕರ್ ಅವರನ್ನು ಕಾಂಗ್ರೆಸಿಗರೇ ಸೋಲಿಸಿದ್ದರು ಎಂದು ಬಿಜೆಪಿ ನಾಯಕ ದಿನೇಶ್ ಅಮ್ಟೂರು ಹೇಳಿದ್ದಾರೆ. ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇ ಕಾಂಗ್ರೆಸ್. ಅವರು ಬರೆದ ಸಂವಿಧಾನವನ್ನು ಜಾರಿಗೊಳಿಸಿದ್ದೇ ಕಾಂಗ್ರೆಸ್. ದೇಶದ ದಲಿತ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ಕೂಡ ಕಾಂಗ್ರೆಸ್. ಇದು ದಿನೇಶ್ ಅಮ್ಟೂರು ಅವರಿಗೆ ತಿಳಿದಿರಲಿ. ಸಂವಿಧಾನಕ್ಕೆ ಅಗೌರವ ತೋರುವ ಬಿಜೆಪಿ ನಾಯಕರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಪುತ್ತೂರು ಶಾಸಕರು ಕ್ಷೇತ್ರದಲ್ಲಿ ದಲಿತರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ದಲಿತ ಕಾಲೋನಿಗಳಿಗೆ ರಸ್ತೆ ನಿರ್ಮಿಸಿದ್ದಾರೆ. ಆರಾಧನಾ ಕೇಂದ್ರಗಳಿಗೆ ಅನುದಾನ ನೀಡಿದ್ದಾರೆ. ಅಶೋಕ ಜನಮನ ಕಾರ್ಯಕ್ರಮದ ಮೂಲಕ ಬಡವರಿಗೆ ನೆರವು ನೀಡುತ್ತಿದ್ದಾರೆ. ಅಶೋಕ್ ರೈ ಅವರಿಂದಾಗಿ ನಮಗೆ ಅಧಿಕಾರ ಸಿಗದು ಎಂಬ ಭಯದಿಂದ ಈಗ ಬಿಜೆಪಿಗರು ಸುಳ್ಳು ಹೇಳುತ್ತಿದ್ದಾರೆ ಎಂದರು.

ಉಂಡ ಮನೆಗೆ ದ್ರೋಹ ಬಗೆದ ಅಣ್ಣಪ್ಪ ಕಾರೆಕ್ಕಾಡ್

ಜಿಪಂ ಮಾಜಿ ಅಧ್ಯಕ್ಷ ಸೋಮನಾಥ್ ಮಾತನಾಡಿ, ದಲಿತ ಸಮಾಜದ ಮುಖಂಡ ಅಣ್ಣಪ್ಪ ಕಾರೆಕ್ಕಾಡ್ ಅವರಿಗೆ ಪಕ್ಷ ನೋಡದೆ ಶಾಸಕ ಅಶೋಕ್ ರೈ ನೆರವು ನೀಡಿದ್ದಾರೆ. ಕೆಲಸವೊಂದರ ಹಿನ್ನೆಲೆಯಲ್ಲಿ ಶಾಸಕರನ್ನು ಭೇಟಿಯಾದಾಗ ನಾವು ಜೊತೆಗಿದ್ದರೂ, ಅಣ್ಣಪ್ಪ ಕಾರೆಕ್ಖಾಡು ಅವರನ್ನೇ ಶಾಸಕರು ಆದರಿಸಿ ಮಾತನಾಡಿಸಿದ್ದಾರೆ. ಬಹಳ ಹಿಂದಿನಿಂದಲೂ ಪಕ್ಷದ ಜೊತೆಗಿದ್ದು ಕೆಲಸ ಮಾಡಿದ ನಮ್ಮನ್ನು ಕಡೆಗಣಿಸಿದರೇ ಎಂಬ ಬೇಸರವಾಯಿತು. ಆದರೂ, ಪಕ್ಷಾತೀತವಾಗಿ ಕೆಲಸ ಮಾಡುವ ಶಾಸಕರ ಗುಣಕ್ಕೆ ಅಭಿನಂದನೆ. ಇದಲ್ಲದೇ ವೈಯಕ್ತಿಕ ಸಹಾಯಗಳನ್ನು ಅಣ್ಣಪ್ಪ ಕಾರೆಕ್ಕಾಡು ಅವರು ಶಾಸಕರಿಂದ ಪಡೆದುಕೊಂಡಿದ್ದಾರೆ. ಆದರೆ ಇದೀಗ ಉಂಡ ಮನೆಗೆ ಎರಡು ಬಗೆಯುವ ಅವರ ನಿಲುವು ಬೇಸರ ತಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮುಕೇಶ್ ಕೆಮ್ಮಿಂಜೆ, ಪ್ರಕಾಶ್ ಹಾರಾಡಿ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts