ಪುತ್ತೂರು: ಅಶೋಕ ಜನ ಮನ ಕಾರ್ಯಕ್ರಮದ ಅಸಮರ್ಪಕ ವ್ಯವಸ್ಥೆಯಿಂದಾಗಿ ಸುಮಾರು 10 – 11 ಜನರು ಅಸ್ವಸ್ಥಗೊಂಡಿರುವುದು ದುಃಖದ ಸಂಗತಿ. ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಶೋಕ್ ಕುಮಾರ್ ರೈ ಅವರಿಗೆ ಜನರ ಮೇಲೆ ಯಾವುದೇ ಕಾಳಜಿ; ರಾಜಕೀಯ ದುರುದ್ದೇಶ ಕಾಣಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಟೀಕಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿ ಮುಂದೆ ಜನ ಸಾಗರ ಕಾಣಬೇಕು ಎನ್ನುವ ದುರುದ್ದೇಶದಿಂದ ಊಟ ನೀರು ಕೊಡದೆ ಉಸಿರಾಡಲು ಸಮಸ್ಯೆ ಉಂಟಾಗಿ ಜನರಿಗೆ ಅಸ್ವಸ್ಥತೆ ಉಂಟಾಗಿದೆ. ಇನ್ನು ಮುಂದೆ ನೀವು ಈ ರೀತಿ ಬೇಜವಾಬ್ದಾರಿತನವನ್ನು ಮಾಡಬೇಡಿ. ಇದನ್ನು ಪಾಠವಾಗಿ ಸ್ವೀಕರಿಸಿ. ಕಾರ್ಯಕ್ರಮಕ್ಕೆ ಜನರನ್ನು ಕರೆದರೆ, ಅವರಿಗೆ ರಕ್ಷಣೆಯನ್ನು ಕೊಡುವ ಜವಾಬ್ದಾರಿಯೂ ನಿಮ್ಮದೇ. ಸಿದ್ದರಾಮಯ್ಯರ ಜೀವದಷ್ಟೇ ಪುತ್ತೂರಿನ ಸಾಮಾನ್ಯ ಜನರ ಜೀವಕ್ಕೂ ಬೆಲೆ ಇದೆ – ಅದನ್ನೂ ಗೌರವಿಸಬೇಕು ಎಂದಿದ್ದಾರೆ.
ಅಶೋಕ್ ರೈ ಅವರಿಗೆ 20 ಸಾವಿರ ಜನ ಸೇರುವ ಕಾರ್ಯಕ್ರಮ ಹೇಗೆ ನಡೆಸಬೇಕು ಎನ್ನುವ ಅನುಭವವೇ ಇಲ್ಲ ಎನಿಸುತ್ತದೆ. ತಮ್ಮ ಒಣ ಪ್ರತಿಷ್ಠೆಗೆ ಮುಗ್ದ ಜನರನ್ನು ಬಳಸಿಕೊಂಡದ್ದು ಬಹುದೊಡ್ಡ ಅಪರಾಧ, ಇದು ಕ್ಷಮಾರ್ಹವಲ್ಲ. ಮುಖ್ಯಮಂತ್ರಿಯವರನ್ನು ಕರೆಸಿ, ಅವರು ಹೋಗುವ ತನಕ ಜನರಿಗೆ ನೀರು, ಆಹಾರ ಕೊಡದೆ ಒಂದು ರೀತಿಯಲ್ಲಿ ಕೂಡಿ ಹಾಕಿದದ್ದು ದೊಡ್ಡ ನಿರ್ಲಕ್ಷ್ಯ ಮತ್ತು ಮಾನವೀಯತೆಯ ಮೇಲೆ ನಡೆದ ಅವಮಾನ ಎಂದು ದೂರಿದ್ದಾರೆ.
ವೇದಿಕೆಯ ಮೇಲೆ ಬಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಹೇಳನ ಮಾಡುವುದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಅಸಂಬದ್ಧ ಆರೋಪ ಮಾಡುವುದು, ಕೋಟ್ಯಂತರ ಜನರ ಜೀವನ ಸುಧಾರಿಸಿದ GST ಕುರಿತು ತಪ್ಪು ಮಾಹಿತಿ ಹರಡುವುದು – ಇವು ರಾಜಕೀಯ ದೌರ್ಬಲ್ಯದ ನಿದರ್ಶನ ಎಂದಿದ್ದಾರೆ.
ಅಶೋಕ ಜನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯಲ್ಲಿ – ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧ ಮಾಡಿಲ್ಲ, ಆದೇಶದಲ್ಲಿ ಯಾವುದೇ ಸಂಘ ಅಥವಾ ಸಂಸ್ಥೆಯ ಹೆಸರಿಲ್ಲ” ಎಂದು ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ತಪ್ಪು ಅರ್ಥ ಸೃಷ್ಟಿಸಿ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುವುದು ಬರೀ ರಾಜಕೀಯವಲ್ಲ, ಅದು ರಾಷ್ಟ್ರದ ಹಿತದ್ರೋಹ ಎಂದಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎನ್ನುವುದು ಕೇವಲ ಸಂಘಟನೆಯಲ್ಲ – ಅದು ದೇಶದ ಭೂಮಿಯೊಡನೆ ಬೆಸೆದುಕೊಂಡಿರುವ ರಾಷ್ಟ್ರಭಕ್ತಿಯ ಚಳವಳಿಯಾಗಿದೆ. ರಾಷ್ಟ್ರಪ್ರೇಮ, ಶಿಸ್ತು, ಸೇವಾಭಾವನೆ, ಮತ್ತು ಸಾಮಾಜಿಕ ಸೌಹಾರ್ದತೆಗಳ ಪಾಠವನ್ನು ನೀಡುವ, ನೂರು ವರ್ಷಗಳಿಂದ ದೇಶವನ್ನು ಏಕತೆಯ ಹಾದಿಯಲ್ಲಿ ನಡಿಸುತ್ತಿರುವ ಮಹಾನ್ ಸಂಸ್ಥೆ. ಆರ್‌ಎಸ್ಎಸ್ ಎಂದರೆ ಶಿಸ್ತು, ತ್ಯಾಗ ಮತ್ತು ದೇಶಕ್ಕಾಗಿ ಬಾಳುವ ಮನೋಭಾವದ ಸಂಕೇತ. ಸ್ವಯಂ ಸೇವಕರು ಅಂದರೆ ಬಲಿದಾನದ ಪ್ರತೀಕ. ಈ ಸಂಸ್ಥೆ ಮತ, ಜಾತಿ, ಭಾಷಾ ಭೇದಗಳನ್ನು ಮೀರಿ ‘ನಾವು ಎಲ್ಲರೂ ಭಾರತೀಯರು’ ಎಂಬ ಭಾವನೆ ಬೆಳೆಸಿದೆ. ಇಂತಹ ಸಂಸ್ಥೆಯನ್ನು ರಾಜಕೀಯ ಅಸೂಯೆಯಿಂದ ಬಣ್ಣ ಹಚ್ಚುವುದು – ನಿಜವಾದ ರಾಷ್ಟ್ರಪ್ರೇಮಿಗಳ ಗೌರವಕ್ಕೆ ಧಕ್ಕೆ ಉಂಟುಮಾಡಿದಂತೆ ಎಂದರು.
ಪ್ರತಿಯೊಂದು ಶಾಲೆಯಲ್ಲಿಯೂ, ಪ್ರತಿಯೊಂದು ಸಮಾಜದಲ್ಲಿಯೂ ಶಿಸ್ತು, ಸಂಸ್ಕಾರ ಮತ್ತು ಸೇವೆಯ ಬೀಜ ಬಿತ್ತುವ ಕೆಲಸ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿದೆ. ಅದನ್ನು ನಿಷೇಧಿಸುವ ವಿಚಾರ ಯೋಚನೆಯೇ ಹಾಸ್ಯಾಸ್ಪದ. ದೇಶಕ್ಕಾಗಿ ಕೆಲಸಮಾಡುವ ಸಂಸ್ಥೆಯನ್ನು ದುರುದ್ದೇಶದಿಂದ ಚಿತ್ರಿಸುವವರು ರಾಷ್ಟ್ರಭಕ್ತಿಯ ಅರ್ಥವೇ ಅರಿಯದವರು. ಈ ರೀತಿಯ ಹೇಳಿಕೆಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಸಹನೆಯ ಮತ್ತು ಮತಾಂಧತೆಯ ಪ್ರತೀಕ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

























