ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ವಿರೋಧಿಸಿ ಬಿಜೆಪಿ ಕರೆ ಕೊಟ್ಟಿದ್ದ ಪ್ರತಿಭಟನೆ ಅಂಗವಾಗಿ ಸೋಮವಾರ ಬೆಳಿಗ್ಗೆ ಆರ್ಯಾಪು ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಿತು.
ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಆರ್.ಸಿ. ನಾರಾಯಣ್ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಭ್ರಷ್ಟಾಚಾರದ ಕೂಪವಾಗಿದೆ. ವಸತಿ ಯೋಜನೆಗಳನ್ನು ತರಬೇಕಾದರು ಶಾಸಕರೂ ಹಣ ನೀಡುವಂತಹ ಪರಿಸ್ಥಿತಿ ಇದೆ. ಅಂದರೆ ರಾಜ್ಯದಲ್ಲಿ 60 ಪರ್ಸೆಂಟ್ ಸರಕಾರ ಆಡಳಿತ ನಡೆಸುತ್ತಿದೆ. ಹೀಗಿರುವಾಗ ಪುತ್ತೂರಿಗೆ ವಸತಿ ಯೋಜನೆಗಳನ್ನು ತರುವಾಗ ಎಷ್ಟು ಹಣ ನೀಡಲಾಗಿದೆ ಎನ್ನುವುದನ್ನು ಪುತ್ತೂರಿನ ಶಾಸಕರಲ್ಲಿ ಕೇಳಬೇಕಾಗಿದೆ ಎಂದರು.
ಗ್ರಾಮ ಮಟ್ಟದಲ್ಲಿ ಮನೆ ಕಟ್ಟಲು ಇಂದು ಸಮಸ್ಯೆಯಾಗಿದೆ. ಅನುಮತಿ ಪಡೆದುಕೊಳ್ಳಲು ಕಾರ್ಮಿಕ ಇಲಾಖೆಯ ಮುಂದೆ ಕ್ಯೂ ನಿಲ್ಲಬೇಕಾಗಿದೆ. ಇದು ಭ್ರಷ್ಟಾಚಾರಕ್ಕೆ ಎಡೆ ನೀಡುವ ವ್ಯವಸ್ಥೆಯಾಗಿದೆ. ಅಲ್ಲದೇ 9/11 ಆಗಬೇಕಾದರೆ ಜನಸಾಮಾನ್ಯರು ಪುಡಾಕ್ಕೆ ಅಲೆಯ ಬೇಕಾಗಿದೆ. ಮೊದಲು ಗ್ರಾಮ ಪಂಚಾಯತ್ ನಲ್ಲೇ ನೀಡಲಾಗುತ್ತಿತ್ತು. ಈ ಮೂಲಕವೂ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಇದು ಜನವಿರೋಧಿ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತುಘಲಕ್ ಸರಕಾರ ಆಡಳಿತದಲ್ಲಿದ್ದು, ಮೌಲ್ವಿಗಳ ಮಾತನ್ನು ಕೇಳುತ್ತಾ ಆಡಳಿತ ನಡೆಸುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಶೇ. 10ರಷ್ಟಿದ್ದ ಮೀಸಲಾತಿಯನ್ನು ಶೇ. 15ಕ್ಕೆ ಏರಿಸಿದ್ದು, ಮೌಲ್ವಿ ಆಡಳಿತ ಎನ್ನುವುದನ್ನು ನಿರೂಪಿಸಿದೆ. ಬಡವರ ಪರ ಆಡಳಿತ ನಡೆಸುವ ಬದಲು, ಬಡವರ ವಿರೋಧಿಯಾಗಿ ವರ್ತಿಸುತ್ತಿದೆ. ಒಂದೆಡೆ ಬೆಲೆ ಏರಿಕೆ ಬಿಸಿಯಾದರೆ, ಇನ್ನೊಂದೆಡೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ. ಅನುದಾನಗಳಿಲ್ಲದೇ ಪಂಚಾಯತ್ ಸೊರಗಿದೆ. ಇದೀಗ ವಿದ್ಯುತ್ ಬಿಲ್‍್ನಲ್ಲೂ 36 ಪೈಸೆ ಪಿಂಚಣಿ ಹಣ ಸಂಗ್ರಹಿಸುತ್ತಿದ್ದು, ಬಡವರ ಜೇಬಿಗೆ ಸರಕಾರ ಕೈ ಹಾಕಿದೆ. ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಆಡಳಿತ ಇರುವಲ್ಲಿಯೂ ನಾವು ಪ್ರತಿಭಟನೆ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ್ಯಂಟಿ ಕಮ್ಯೂನಲ್ ಫೋರ್ಸ್ ಜಾರಿಗೆ ತಂದು, ಜಿಲ್ಲೆಗೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ,. ನಮ್ಮ ನಾಯಕರ ಮನೆಗಳಿಗೆ ರಾತ್ರೋರಾತ್ರಿ ನುಗ್ಗಿ ಅವರ ಫೊಟೋ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಇಂತಹ ಕಾರ್ಯ ನಿಲ್ಲಿಸದೇ ಹೋದರೆ, ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಗ್ರಾಪಂ ಪಿಡಿಓ ನಾಗೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.
ಗ್ರಾಪಂ ಅಧ್ಯಕ್ಷೆ ಗೀತಾ ಎಂ., ಸದಸ್ಯರಾದ ಯತೀಶ್ ದೇವ, ಹರೀಶ್ ನಾಯಕ್ ಬಳಕ್ಕ, ಶ್ರೀದುರ್ಗಾ ವಸಂತ ಕುಂಜೂರುಪಂಜ, ಚೇತನ್ ಗೌಡ ದೇವಸ್ಯ, ಶ್ರೀನಿವಾಸ್ ರೈ, ಕಸ್ತೂರಿ ಕೂರೇಲು, ಸರಸ್ವತಿ ಮೇಗಿನಪಂಜ, ಬಿಜೆಪಿ 4ನೇ ವಾರ್ಡ್ ಬೂತ್ ಅಧ್ಯಕ್ಷ ಶಶಿಧರ್ ಗೌಡ ಮರಿಕೆ, 3ನೇ ವಾರ್ಡ್ ಅಧ್ಯಕ್ಷ ಸಂತೋಷ್ ಮೇರ್ಲ, ಕುರಿಯ ಶಕ್ತಿ ಕೇಂದ್ರ ಅಧ್ಯಕ್ಷ ಮೋಹನ್, ಪ್ರಮುಖರಾದ ಸುಧಾಕರ್ ಭಟ್ ಆರ್ಯಾಪು ಕಿಶೋರ್ ಮರಿಕೆ, ಧನುಷ್ ಹೊಸಮನೆ, ತಿಮ್ಮಪ್ಪ ಗೌಡ ಕೂರೇಲು, ಅಪ್ಪಿ ಪುಂಡಿಕಾಯಿ, ಇಬ್ರಾಯಿ ಪಾಪೆತ್ತಡ್ಕ, ಅರುಣಾ ಸಂಪ್ಯ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ವಿರೂಪಾಕ್ಷ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಯುವಮೋರ್ಚಾ ಉಪಾಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ಆರ್ಯಾಪು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.