ಮಧ್ಯಪ್ರದೇಶದ ಇಂದೋರ್ ನಗರ ಪಾಲಿಕೆಯಲ್ಲಿ ಬಜೆಟ್‌ಗೆ ಸಂಬಂಧಿಸಿದ ಚರ್ಚೆಯ ವೇಳೆ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಹಾಡಲು ಕಾಂಗ್ರೆಸ್‌ನ ಇಬ್ಬರು ಮಹಿಳಾ ಸದಸ್ಯರು ನಿರಾಕರಿಸಿದ್ದು, ಇದು ಸಂಘರ್ಷಕ್ಕೆ ನಾಂದಿ ಹಾಡಿದೆ.
ಪಾಲಿಕೆಯ ಕಲಾಪದ ಆರಂಭದಲ್ಲಿ ‘ವಂದೇ ಮಾತರಂ’ ಗಾಯನ ಆರಂಭವಾದಾಗ, ಕಾಂಗ್ರೆಸ್ ಸದಸ್ಯರಾದ ಫೌಜಿಯಾ ಶೇಖ್ ಅಲೀಮ್ ಮತ್ತು ರುಬಿನಾ ಇಕ್ಬಾಲ್ ಅವರು ಹಾಡಲು ನಿರಾಕರಿಸಿದರು. ಅಷ್ಟೇ ಅಲ್ಲದೆ, “ವಂದೇ ಮಾತರಂ ಹಾಡಬೇಕು ಎಂದು ಯಾವ ಕಾನೂನಿನಲ್ಲಿದೆ? ಆ ಕಾನೂನಿನ ಪ್ರತಿಯನ್ನು ನಮಗೆ ತೋರಿಸಿ” ಎಂದು ಫೌಜಿಯಾ ಅವರು ಪಾಲಿಕೆಯ ಅಧ್ಯಕ್ಷರಿಗೆ ಸವಾಲು ಹಾಕಿದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ, ಸಭಾಪತಿ ಮುನ್ನಾಲಾಲ್ ಯಾದವ್ ಅವರು ಫೌಜಿಯಾ ಅವರನ್ನು ಸದನದಿಂದ ಹೊರಹಾಕುವಂತೆ ಆದೇಶಿಸಿದರು.
ಮಾಧ್ಯಮದ ಮುಂದೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡ ರುಬಿನಾ ಇಕ್ಬಾಲ್, “ನಮ್ಮ ಇಸ್ಲಾಂ ಧರ್ಮದಲ್ಲಿ ವಂದೇ ಮಾತರಂ ಹಾಡುವುದು ನಿಷಿದ್ಧ. ನಮಗೆ ಅಲ್ಲಾಹನೇ ಸರ್ವೋಚ್ಚ. ‘ವಂದೇ’ ಎಂದರೆ ಆರಾಧನೆ, ‘ಮಾತರಂ’ ಎಂದರೆ ತಾಯಿ. ನಾವು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸುವುದಿಲ್ಲ. ಹೀಗಿರುವಾಗ ವಂದೇ ಮಾತರಂ ಏಕೆ ಹಾಡಬೇಕು?” ಎಂದು ಪ್ರಶ್ನಿಸಿದರು. ನಾವು ‘ಸಾರೇ ಜಹಾನ್ ಸೆ ಅಚ್ಚಾ’ ಹಾಡುತ್ತೇವೆ, ಆದರೆ ವಂದೇ ಮಾತರಂ ಹಾಡುವುದಿಲ್ಲ ಎಂದರು.
ಇದೇ ವೇಳೆ ಅವರು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿ, ಮುಸ್ಲಿಮರ ಅಂಗಡಿಗಳಿಗೆ ತೊಂದರೆ ನೀಡುವ ಬಿಜೆಪಿ, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು.
ಸ್ವಪಕ್ಷೀಯರಿಂದಲೇ ವಿರೋಧ
ಈ ಸದಸ್ಯರ ನಡೆಯನ್ನು ಸ್ವತಃ ಕಾಂಗ್ರೆಸ್ ಪಕ್ಷವೇ ಖಂಡಿಸಿದೆ. ಕಾಂಗ್ರೆಸ್ ವಕ್ತಾರ ಕೆ.ಕೆ. ಮಿಶ್ರಾ ಅವರು ಅತ್ಯಂತ ಕಠಿಣ ಪದಗಳಲ್ಲಿ ಪ್ರತಿಕ್ರಿಯಿಸಿದ್ದು, “ರಾಷ್ಟ್ರಪ್ರೇಮ ತೋರಲು ಸಾಧ್ಯವಾಗದವರು ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ. ವಂದೇ ಮಾತರಂ ಹಾಡಲು ನಿರಾಕರಿಸುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅಪಮಾನ” ಎಂದು ಗುಡುಗಿದ್ದಾರೆ. ಇದು ಬಿಜೆಪಿಯೊಂದಿಗೆ ಕೈಜೋಡಿಸಿ ನಡೆಸುತ್ತಿರುವ ರಾಜಕೀಯ ಬ್ಲ್ಯಾಕ್‌ಮೇಲ್ ತಂತ್ರ ಎಂದು ಅವರು ಆರೋಪಿಸಿದ್ದಾರೆ. ಇತ್ತ ರುಬಿನಾ ಅವರು, “ಕಾಂಗ್ರೆಸ್ ನಮ್ಮನ್ನು ಓಟ್ ಬ್ಯಾಂಕ್‌ನಂತೆ ಬಳಸುತ್ತಿದೆ, ಪಕ್ಷದಿಂದ ಹೊರಹಾಕಿದರೆ ನಾವು ಪಕ್ಷೇತರರಾಗಿ ಅಥವಾ ಒವೈಸಿ ಪಕ್ಷ ಸೇರಿ ಗೆದ್ದು ತೋರಿಸುತ್ತೇವೆ” ಎಂದು ಪಕ್ಷದ ನಾಯಕತ್ವಕ್ಕೇ ಸವಾಲು ಹಾಕಿದ್ದಾರೆ.






















