ಶಬರಿಮಲೆಯ ಪವಿತ್ರ ಹದಿನೆಂಟನೇ ಪಡಿ ಮತ್ತು ಗರ್ಭಗುಡಿಯ ಚಿನ್ನದ ಲೇಪನ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕ (ತಂತ್ರಿ) ಕಂದರಾರು ರಾಜೀವರು ಅವರನ್ನು ವಿಶೇಷ ತನಿಖಾ ತಂಡ (SIT) ಶುಕ್ರವಾರ ಬಂಧಿಸಿದೆ.
ಶುಕ್ರವಾರ ಮುಂಜಾನೆಯಿಂದಲೇ ಅಜ್ಞಾತ ಸ್ಥಳದಲ್ಲಿ ರಾಜೀವರು ಅವರನ್ನು ಸುದೀರ್ಘ ವಿಚಾರಣೆ ನಡೆಸಿ ಎಸ್‌ಐಟಿ ಅಧಿಕಾರಿಗಳು, ಮಧ್ಯಾಹ್ನದ ವೇಳೆಗೆ ಎಸ್‌ಐಟಿ ಕಚೇರಿಗೆ ಕರೆತಂದರು. ಅಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಅಧಿಕೃತವಾಗಿ ಬಂಧನ ಪ್ರಕ್ರಿಯೆಯನ್ನು ನಡೆಸಿದರು.
ದೇವಸ್ಥಾನದ ದ್ವಾರಪಾಲಕರ ಪೀಠಗಳು ಮತ್ತು ಗರ್ಭಗುಡಿಯ (ಶ್ರೀಕೋವಿಲ್) ಬಾಗಿಲ ಚೌಕಟ್ಟಿಗೆ ಮರು ಚಿನ್ನದ ಲೇಪನ ಮಾಡುವಂತೆ ರಾಜೀವರು ಶಿಫಾರಸು ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯು ಮರು ಲೇಪನದ ಬಗ್ಗೆ ಅನುಮತಿ ಕೋರಿದಾಗ, ರಾಜೀವರು ಅದಕ್ಕೆ ತಕ್ಷಣ ಸಮ್ಮತಿ ನೀಡಿದ್ದರು.
ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟ್ಟಿ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮಕುಮಾರ್ ನೀಡಿದ ಹೇಳಿಕೆಗಳ ಆಧಾರದ ಮೇಲೆ ಈ ಬಂಧನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 ಜನರ ಬಂಧನ:
ಕೇರಳ ಹೈಕೋರ್ಟ್ ನಿರ್ದೇಶನದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡವು ಈವರೆಗೆ ಈ ಪ್ರಕರಣದಲ್ಲಿ 11 ಜನರನ್ನು ಬಂಧಿಸಿದೆ. ರಾಜೀವರು ಈ ಪ್ರಕರಣದ 11ನೇ ಆರೋಪಿಯಾಗಿದ್ದಾರೆ. ಈ ಹಿಂದೆ ಕೂಡ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು, ಆದರೆ ಈಗ ಪ್ರಬಲ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.






















