ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಹಿರಿಯ ಮಗ ಹಾಗೂ ಪಕ್ಷದ ಮುಖಂಡ ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ.
ಬೇಜವಾಬ್ದಾರಿಯುತ ನಡವಳಿಕೆ ಕಾರಣ ನೀಡಿ ಅವರು ತೇಜ್ ಪ್ರತಾಪ್ ಯಾದವ್ ಅವರನ್ನು ಆರು ವರ್ಷ ಕಾಲ ಪಕ್ಷದಿಂದ ಉಚ್ಛಾಟಿಸಿದ್ದಾರೆ. ಹಾಗೆಯೇ, ಕುಟುಂಬ ಮೌಲ್ಯಗಳಿಗೆ ಬೆಲೆ ಕೊಟ್ಟಿಲ್ಲವೆಂದು ಹೇಳಿ ಕುಟುಂಬದಿಂದಲೂ ಅವರನ್ನು ಹೊರಹಾಕಿದ್ದಾರೆ.
ಬಿಹಾರದ ಮಾಜಿ ಮಂತ್ರಿಯೂ ಆದ ತೇಜ್ ಪ್ರತಾಪ್ ಯಾದವ್ ಅವರ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ಅಚ್ಚರಿಯ ಪೋಸ್ಟ್ವೊಂದು ಪ್ರಕಟವಾಗಿತ್ತು. ಅದರಲ್ಲಿ ತಾನು ಅನುಷ್ಕಾ ಯಾದವ್ ಎಂಬ ಯುವತಿಯೊಂದಿಗೆ 12 ವರ್ಷಗಳಿಂದ ಪ್ರೀತಿಯಲ್ಲಿದ್ದೇನೆ ಎಂದು ಬರೆದಿದ್ದರು. ತನ್ನ ಫೇಸ್ಬುಕ್ ಪೇಜ್ ಅನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ತೇಜ್ ಪ್ರತಾಪ್ ಯಾದವ್ ಸಮಜಾಯಿಷಿ ನೀಡಿದ್ದರು. ಅದಾದ ಒಂದು ದಿನದ ಬಳಿಕ ಲಾಲೂ ಪ್ರಸಾದ್ ಯಾದವ್ ತಮ್ಮ ಹಿರಿಯ ಮಗನ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ.
‘ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಕಡೆಗಣಿಸುವುದರಿಂದ ಸಾಮಾಜಿಕ ನ್ಯಾಯಕ್ಕಾಗಿನ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತದೆ. ಹಿರಿಯ ಮಗನ ಚಟುವಟಿಕೆ, ಸಾರ್ವಜನಿಕ ನಡವಳಿಕೆಯು ಬೇಜವಾಬ್ದಾರಿಯುತವಾಗಿದ್ದು, ನಮ್ಮ ಕುಟಂಬ ಮೌಲ್ಯಗಳು ಮತ್ತು ಸಂಸ್ಕಾರಕ್ಕೆ ಹೊಂದಿಕೆ ಆಗುವುದಿಲ್ಲ. ಹೀಗಾಗಿ, ಅವರನ್ನು ಪಕ್ಷದಿಂದ ಮತ್ತು ಕುಟುಂಬದಿಂದ ಹೊರಹಾಕುತ್ತಿದ್ದೇನೆ. ಇವತ್ತಿನಿಂದ ಅವರಿಗೆ ಪಕ್ಷದಲ್ಲಿ ಮತ್ತು ಕುಟುಂಬದಲ್ಲಿ ಯಾವುದೇ ರೀತಿಯ ಪಾತ್ರ ಇರುವುದಿಲ್ಲ. ಅವರನ್ನು 6 ವರ್ಷ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ,’ ಎಂದು ಎಕ್ಸ್ನಲ್ಲಿ ಮಾಜಿ ಬಿಹಾರ ಸಿಎಂ ಪೋಸ್ಟ್ ಮಾಡಿದ್ದಾರೆ.
‘ಆತನ ಜೊತೆ ಯಾರಾದರೂ ಸಂಬಂಧ ಇಟ್ಟುಕೊಳ್ಳಬೇಕೆನ್ನುವವರು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಲಿ’ ಎಂದೂ ಲಾಲೂ ಯಾದವ್ ಹೇಳಿದ್ದಾರೆ.
ತೇಜ್ ಪ್ರತಾಪ್ ಯಾದವ್ ಡೈವೋರ್ಸ್ ಇನ್ನೂ ಪೂರ್ಣಗೊಂಡಿಲ್ಲ…
ತೇಜ್ ಪ್ರತಾಪ್ ಯಾದವ್ 2018ರಲ್ಲಿ ಮಾಜಿ ಬಿಹಾರ ಮುಖ್ಯಮಂತ್ರಿ ದರೋಗಾ ರಾಯ್ ಅವರ ಮೊಮ್ಮಗಳು, ಹಾಗೂ ಮಾಜಿ ಸಚಿವ ಚಂದ್ರಿಕಾರ ರಾಯ್ ಅವರ ಮಗಳೂ ಆದ ಐಶ್ವರ್ಯಾ ಅವರನ್ನು ಮದುವೆಯಾಗಿದ್ದರು. ಕೆಲವೇ ತಿಂಗಳಲ್ಲಿ ಐಶ್ವರ್ಯಾ ಗಂಡನ ಮನೆ ಬಿಟ್ಟು ಬಂದಿದ್ದರು. ತನ್ನ ಗಂಡ ಹಾಗೂ ಆತನ ಮನೆಯವರು ಸೇರಿಕೊಂಡು ಮನೆಯಿಂದ ಹೊರಹಾಕಿದರು ಎಂದು ಆಕೆ ಆರೋಪಿಸಿದ್ದರು. ಅಲ್ಲದೇ, ತೇಜ್ ಪ್ರತಾಪ್ ಯಾದವ್ ದಾರಿತಪ್ಪಿದ ವ್ಯಕ್ತಿಯಾಗಿದ್ದು, ಡ್ರಗ್ಸ್ ದಾಸರಾಗಿದ್ದಾರೆ, ಖಾಸಗಿಯಲ್ಲಿ ಮಹಿಳೆ ರೀತಿ ಬಟ್ಟೆ ಧರಿಸುವ ವಿಲಕ್ಷಣ ವ್ಯಕ್ತಿ ಎಂಬೆಲ್ಲಾ ಆರೋಪಗಳನ್ನು ಐಶ್ವರ್ಯಾ ಮಾಡಿದ್ದಾರೆ.
ಇವರ ವಿವಾಹ ವಿಚ್ಛೇದನ ಅರ್ಜಿ ಪಾಟ್ನಾದ ಕೌಟುಂಬಿಕ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದಿದೆ. ಚಂದ್ರಿಕಾ ರಾಯ್ ಅವರು ತಮ್ಮ ಮಗಳಿಗೆ ನ್ಯಾಯ ಕೊಡಿಸುವ ಸಲುವಾಗಿ ಆರ್ಜೆಡಿ ಪಕ್ಷದಿಂದಲೂ ಹೊರಬಂದಿದ್ದರು.
ನಿನ್ನೆ, ತೇಜ್ ಪ್ರತಾಪ್ ಯಾದವ್ ತಮ್ಮ ಫೇಸ್ಬುಕ್ನಲ್ಲಿ ಯುವತಿಯೊಬ್ಬಳ ಫೋಟೋ ಹಾಕಿ, ಈಕೆಯನ್ನು ತಾನು ಪ್ರೀತಿಸುತ್ತಿದ್ದು 12 ವರ್ಷಗಳಿಂದ ಸಂಬಂಧದಲ್ಲಿರುವುದಾಗಿ ಬರೆದಿದ್ದರು.
ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಲಾಲೂ ಪ್ರಸಾದ್ ಯಾದವ್ ಕ್ರಮವನ್ನು ಕುಟುಂಬದ ಇತರ ಸದಸ್ಯರು ಬೆಂಬಲಿಸಿದ್ದಾರೆ. ಕಿರಿಯ ಸಹೋದರ ತೇಜಸ್ವಿ ಯಾದವ್ ಹಾಗೂ ಮಗಳು ರೋಹಿಣಿ ಆಚಾರ್ಯ ಅವರು ಅಪ್ಪನ ನಿರ್ಧಾರಕ್ಕೆ ಬೆಂಬಲ ಕೊಟ್ಟಿದ್ದಾರೆ.