ದೇಶ

ಮಾತಿನ ಮೇಲೆ ನಿಗಾ ಇರಲಿ: ಸಚಿವರಿಗೆ ಮೋದಿ ಖಡಕ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಈಗಾಗಲೇ ಬಿಜೆಪಿಯು 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ಇನ್ನು 100 ದಿನಗಳವರೆಗೆ ವಿಶ್ರಮಿಸದಿರಿ ಎಂದು ಕಾರ್ಯಕರ್ತರಿಗೆ ಮೋದಿ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಸಚಿವರೊಂದಿಗೆ ಸಭೆ ನಡೆಸಿದ ಮೋದಿ, ವಿವಾದಾತ್ಮಕ ಹೇಳಿಕೆಗಳಿಂದ ದೂರ ಇರಿ ಎಂಬುದಾಗಿ ಸಚಿವರಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಲೋಕಸಭೆ ಚುನಾವಣೆ, ವಿಕಸಿತ ಭಾರತ ನಿರ್ಮಾಣಕ್ಕಾಗಿ ಸಿದ್ಧತೆ, ಮುಂದಿನ ಐದು ವರ್ಷಗಳವರೆಗೆ ಕೈಗೊಳ್ಳಬೇಕಾದ ಯೋಜನೆಗಳ ಜಾರಿ ಸೇರಿ ಹಲವು ವಿಷಯಗಳನ್ನು ಚರ್ಚಿಸಲು ಮೋದಿ ಸಚಿವರೊಂದಿಗೆ ಸಭೆ ನಡೆಸಿದರು. “ಮುಂಬರುವ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ನಾವು ಶೀಘ್ರದಲ್ಲಿಯೇ ಹೀಗೆ ಮತ್ತೊಂದು ಸಭೆ ನಡೆಸುತ್ತೇವೆ. ಆದರೆ, ಚುನಾವಣೆ ವೇಳೆ ಸಚಿವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು. ಸಾರ್ವಜನಿಕರೊಂದಿಗೆ ಬೆರೆತು, ಕೇಂದ್ರದ ಯೋಜನೆಗಳನ್ನು ಅವರಿಗೆ ತಲುಪಿಸಿ. ಆದರೆ, ಯಾವುದೇ ಕಾರಣಕ್ಕೂ ವಿವಾದಾತ್ಮಕ ಹೇಳಿಕೆ ನೀಡದಿರಿ” ಎಂಬುದಾಗಿ ಮೋದಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

SRK Ladders

ವಿಕಸಿತ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರು ಸಭೆಯಲ್ಲಿ ವಿಷನ್‌ ಇಂಡಿಯಾ ಡಾಕ್ಯುಮೆಂಟ್‌ ಕೂಡ ರಿಲೀಸ್‌ ಮಾಡಿದ್ದಾರೆ. 25 ವರ್ಷಗಳ ದೂರದೃಷ್ಟಿಯ ಕನಸು ನನಸಾಗಿಸುವ ದಿಸೆಯಲ್ಲಿ ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಬಹುದಾದ ಯೋಜನೆಗಳು, ದೇಶದ ಜನರ ಏಳಿಗೆ, ಸುಸ್ಥಿರ ಆರ್ಥಿಕತೆ ನಿರ್ಮಾಣ, ಉದ್ಯೋಗ ಸೃಷ್ಟಿ, ನಾವೀನ್ಯತೆ, ತಂತ್ರಜ್ಞಾನದ ಅಳವಡಿಕೆ ಸೇರಿ ಹಲವು ವಿಷಯಗಳ ಕುರಿತು ನರೇಂದ್ರ ಮೋದಿ ಅವರು ಮಾತನಾಡಿದ್ದು, ಸಚಿವರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 195 ಅಭ್ಯರ್ಥಿಗಳಲ್ಲಿ ಹೊಸ ಮುಖಗಳಿಗೆ, ಯುವಕರಿಗೆ, ಮಹಿಳೆಯರಿಗೆ ಆದ್ಯತೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ನ ಗಾಂಧಿನಗರ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲಖನೌ, ಸ್ಮೃತಿ ಇರಾನಿ ಅವರು ಅಮೇಥಿಯಿಂದ, ಕಿರಣ್‌ ರಿಜಿಜು ಅರುಣಾಚಲ ಪಶ್ಚಿಮ, ಪೋರ್‌ಬಂದರ್‌ನಿಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ, ಕೇರಳದ ಪಥಣಂತಿಟ್ಟದಿಂದ ಎ.ಕೆ. ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿ, ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ತಿರುವನಂತಪುರಂನಿಂದ ಟಿಕೆಟ್‌ ನೀಡಲಾಗಿದೆ. ಮಧ್ಯಪ್ರದೇಶದ ವಿದಿಶಾದಿಂದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಣಕ್ಕಿಳಿದಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts