Friday, November 22
Share News

ಪುತ್ತೂರು: ಗುದ್ದಲಿ ಪೂಜೆ ನಡೆದು 3 ತಿಂಗಳು ಕಳೆದಿರುವ ಪುರುಷರಕಟ್ಟೆಯಿಂದ ಪಾಪೆತ್ತಡ್ಕ ನಡುವಿನ ರಸ್ತೆ ಕಾಮಗಾರಿಯನ್ನು ಮುಂದಿನ ಮೂರು ದಿನದೊಳಗೆ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಕೆ ನೀಡಿದರು.

ಪುತ್ತೂರು – ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ – ಪಾಪೆತ್ತಡ್ಕ ನಡುವಿನ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.

ಸುಮಾರು 2.75 ಕೋಟಿ ರೂ. ಅನುದಾನ ಪುರುಷರಕಟ್ಟೆ – ಪಾಪೆತ್ತಡ್ಕ ನಡುವಿನ ರಸ್ತೆಗೆ ಬಿಡುಗಡೆಗೊಂಡಿತ್ತು. ರಸ್ತೆ ಕಾಮಗಾರಿಗೆ ಡಿಸೆಂಬರ್ 1ರಂದು ಗುದ್ದಲಿ ಪೂಜೆಯನ್ನು ನೆರವೇರಿಸಲಾಗಿತ್ತು. ಸದ್ಯ, ಡಾಮರನ್ನು ತೆಗೆದಿದ್ದು, ರಸ್ತೆಯನ್ನು ತಗ್ಗಿಸಲಾಗಿದೆ. ತಗ್ಗಿಸಿರುವ ರಸ್ತೆಗೆ ಜಲ್ಲಿ ಹಾಕಿ ಬಿಡಲಾಗಿದೆ. ಇದಕ್ಕೆ ದಿನನಿತ್ಯ ನೀಡು ಹಾಯಿಸುತ್ತಿದ್ದು, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ದಿನನಿತ್ಯ ಓಡಾಡುವ ವಾಹನಗಳಿಗೆ ಇದರಿಂದ ತುಂಬಾ ಸಮಸ್ಯೆಯಾಗಿದೆ. ದ್ವಿಚಕ್ರ ವಾಹನಗಳು ಪ್ರಯಾಸದಿಂದ ಪ್ರಯಾಣಿಸುವಂತಾಗಿದೆ. ಪಾದಚಾರಿಗಳ ಪಾಡು ಕೇಳುವುದೇ ಬೇಡ. ಹೀಗಿರುವಾಗ ರಸ್ತೆ ಕಾಮಗಾರಿ ವಿಳಂಬ ಮಾಡುತ್ತಿರುವುದು ಯಾಕೆ ಎಂದು ಶಾಸಕರನ್ನು ಪ್ರಶ್ನಿಸಲಾಯಿತು.

ಉತ್ತರಿಸಿದ ಶಾಸಕರು, ಗುತ್ತಿಗೆದಾರರಲ್ಲಿ ಈಗಾಗಲೇ ಮಾತನಾಡಿದ್ದೇನೆ. ಸೋಮವಾರಕ್ಕೆ ಮೊದಲು ಕಾಮಗಾರಿ ಮುಗಿಸುವಂತೆ ಸೂಚನೆ ನೀಡಲಾಗಿದೆ. ಇದಾಗಿ ಮೂರು ದಿನಗಳ ಗಡುವು ನೀಡಲಾಗಿದೆ. ಅಷ್ಟರೊಳಗೆ ಡಾಮರು ಹಾಕಿ ನೀಡುವಂತೆ ತಿಳಿಸಿದ್ದೇನೆ. ಒಂದು ವೇಳೆ ಈ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸದೇ ಇದ್ದರೆ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದರು.


Share News

Comments are closed.

Exit mobile version