Friday, November 22
Share News

ಪುತ್ತೂರು: ಕಾಮಗಾರಿಗಳ ವಿವರ ಕೊಡಿ ಎಂಬುದಾಗಿ ಪೋಸ್ಟು ಗಳನ್ನು ಹಾಕುತ್ತಿದ್ದುದನ್ನು ಗಮನಿಸಿದ ಶಾಸಕರ ಅಭಿಮಾನಿ ಬಳಗದ ಸದಸ್ಯರು ಬ್ಯಾಂಡ್ ಮೂಲಕ ಜಯಾನಂದ ಎಂಬವರ ಮನೆಗೆ ತೆರಳಿ ಕಾಮಗಾರಿಗಳ ವಿವರದ ಪ್ಲೆಕ್ಸ್ ಅನ್ನು ಓದಿಸಿ ಇನ್ನು ಮುಂದೆ ಅಪಪ್ರಚಾರ ಮಾಡಬಾರದು ಎಂಬುದಾಗಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ವಿಧಾನಸಭಾ ಕ್ಷೇತ್ರದಲ್ಲಿ ಅಶೋಕ್‌ ಕುಮಾ‌ರ್ ರೈಯವರು ಶಾಸಕರಾದ 10 ತಿಂಗಳಿನಲ್ಲಿ ಅಭಿವೃದ್ಧಿಯ ಪರ್ವವನ್ನೇ ನಡೆಸಿದ್ದಾರೆ… ಸುಮಾರು 1474.29 ಕೋಟಿ ರೂಪಾಯಿಗಳ ದಾಖಲೆಯ ಅನುದಾನವನ್ನು ಪುತ್ತೂರು ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಿದ್ದಾರೆ…. ಈ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ವ್ಯಕ್ತಪಡಿಸುವ ರೀತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪುತ್ತೂರಿನ ತಾರೀತ್ತಡಿ ನಿವಾಸಿ ಜಯಾನಂದ ಬಂಗೇರ ವ್ಯಂಗ್ಯರೀತಿಯಲ್ಲಿ ಬರಹಗಳನ್ನು ಬರೆದು ಅನುದಾನ ಬಿಡುಗಡೆ ಆಗಿಲ್ಲ ಎಂದು ಪೋಸ್ಟ್ ಮಾಡಿದ್ದರು.

ಚೆಂಡೆ – ಬ್ಯಾಂಡ್ ನೊಂದಿಗೆ ತೆರಳಿ ಬ್ಯಾನರ್ ಪ್ರದರ್ಶನ

ಸಾಮಾಜಿಕ ಜಾಲತಾಣದ ಬರವಣಿಗೆ ವಿಚಾರದಲ್ಲಿ 15ಕ್ಕೂ ಅಧಿಕ ಜನರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ನಿಂಧಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಜ್ವಲ್ ರೈ, ಸನತ್ ರೈ ಸಹಿತ 15 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸದಸ್ಯ ತಾರಿಗುಣ್ಣ ನಿವಾಸಿ ಜಯಾನಂದ ಕೆ. (41) ದೂರು ನೀಡಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಬರೆದಿರುವ ಬ್ಯಾನ‌ರ್ ಪ್ರದರ್ಶಿಸಿಕೊಂಡು ಚೆಂಡೆಗಳನ್ನು ಜೋರಾಗಿ ಬಡಿಯುತ್ತಾ ಅಕ್ರಮವಾಗಿ ಪ್ರವೇಶ ಮಾಡಿ ತನಗೆ, ತಾಯಿಗೆ, ಪತ್ನಿ, ಮಕ್ಕಳಿಗೆ ಅವಾಚ್ಯವಾಗಿ ನಿಂಧಿಸಿದ್ದಾರೆ. ಗೋಡೆಗೆ ಕಾಲಿನಿಂದ ಒದ್ದು ಅಸಭ್ಯವಾಗಿ ವರ್ತನೆ ತೋರಿದ್ದಲ್ಲದೆ, ನೀನು ಬಾರಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬಗ್ಗೆ ಬರೆಯುತ್ತಿಯಾ ಎಂದು ಗದರಿಸಿ, ನಿನ್ನನ್ನು ನೋಡಿಕೊಳ್ಳುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಶಾಸಕರು ಏನಂತಾರೆ?

ಈ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಪಕ್ಷದ ವ್ಯಕ್ತಿಗಳಿರಲಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.


Share News

Comments are closed.

Exit mobile version