Friday, November 22
Share News

ಪುತ್ತೂರು: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಪ್ರಸಿದ್ದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಜೂ.16ರಂದು ನೇಮಕಗೊಂಡಿದ್ದಾರೆ.

ಇವರು ಮೂಲತಃ ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿಯಾಗಿದ್ದು, ದಿ. ಸುಬ್ರಾಯ ತೋಡ್ತಿಲ್ಲಾಯ ಮತ್ತು ದಿ.ಯಶೋಧ ದಂಪತಿಗಳ ಪುತ್ರರಾಗಿದ್ದಾರೆ. ಹಿಂದೆ ಸುಬ್ರಾಯ ತೋಡ್ತಿಲ್ಲಾಯರು ಕೂಡ ಇದೇ ದೇವಸ್ಥಾನದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಅಜ್ಜ ದಿ.ನಾರಾಯಣ ತೋಡ್ತಿಲ್ಲಾಯರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವು ವರ್ಷಗಳ ಕಾಲ ಪೂಜಾ ಸೇವೆಯನ್ನು ಸಲ್ಲಿಸಿದ್ದರು. ಪಾಲಾಲೆ ದಿ. ಸತೀಶ ಯಡಪಡಿತ್ತಾಯರಲ್ಲಿ ವೇದ ಅಭ್ಯಾಸವನ್ನು ಮಾಡಿದ್ದ ಸತ್ಯನಾರಾಯಣ ತೋಡ್ತಿಲ್ಲಾಯರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಪೂಜಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಸ್ನೇಹ ಹಾಗೂ ಪುತ್ರ ಸೌರಭ್ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

ಅಕ್ಕರ ದೇಸಿ ಸಮುದಾಯ ಸಂಘವು ಸತ್ಯನಾರಾಯಣರವರ ನೇಮಕಕ್ಕೆ ಶಿಫಾರಸು ಮಾಡಿತ್ತು. ಕೊಕ್ಕಡದ ಎಡಪಡಿತ್ತಾಯ, ಬಾಳ್ತಿಲ್ಲಾಯ, ಶಬರಾಯ, ಉಪ್ಪಾರ್ಣ, ತೋಡ್ತಿಲ್ಲಾಯ ಕುಲದ ಸದಸ್ಯರಿಗೆ ಈ ಹಿಂದಿನಿಂದಲೂ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಇದೆ.


Share News

Comments are closed.

Exit mobile version