Friday, November 22
Share News

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಕ್ಷೇತ್ರಗಳಿಗಾಗಿ ನಾನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಿತ್ತಾ? ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದಲ್ಲೂ ಹಾಸನ ಹಾಗೂ ಮಂಡ್ಯದಲ್ಲಿ ನಾವು ಗೆಲುವು ಸಾಧಿಸುತ್ತಿದ್ದೆವು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಹೈಕಮಾಂಡ್‌ ನಲ್ಲಿ ನಾವೇನು 6-7 ಸ್ಥಾನಗಳನ್ನು ಕೇಳಿಲ್ಲ. ಹಾಸನ, ಮಂಡ್ಯ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ. ರಾಜ್ಯದ 18 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಾಬಲ್ಯವಿದೆ. ಅದನ್ನು ಬಳಸಿಕೊಳ್ಳುವಂತೆ ಬಿಜೆಪಿಗೆ ಹೇಳುತ್ತೇನೆ ಎಂದರು.

ಬಿಜೆಪಿ ಹೈಕಮಾಂಡ್ ರಾಜ್ಯದ 20 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ವೇಳೆ ಅವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅಲ್ಲದೆ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ ಗೆ ಬಿಟ್ಟು ಕೊಡಲು ಬಿಜೆಪಿ ವರಿಷ್ಠರು ಮೀನಾ ಮೇಷ ಎಣಿಸುತ್ತಿರುವ ಬಗ್ಗೆ ಪಕ್ಷದ ಚುನಾವಣಾ ಉಸ್ತುವಾರಿ, ಸಹ ಉಸ್ತುವಾರಿಗಳು ಹಾಗೂ ಜೆಡಿಎಸ್‌ ಕೋರ್ ಕಮಿಟಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಮ್ಮನ್ನು, ನಮ್ಮ ಪಕ್ಷವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ನಮ್ಮನ್ನು ಬಿಜೆಪಿಯವರು ಕರೆಯುತ್ತಿಲ್ಲ. ಆರಂಭದಲ್ಲಿಯೆ ಹೀಗಾದರೆ ಮುಂದೇನು? ಇದು ಪಕ್ಷಕ್ಕೆ ಮಾರಕ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.

ರಾಜ್ಯದ 18 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಶಕ್ತಿ ಜೆಡಿಎಸ್‌ ಪಕ್ಷಕ್ಕೆ ಇದೆ. ಶೇ.3 ರಿಂದ 4ರಷ್ಟು ಜೆಡಿಎಸ್‌ ಮತಗಳು ಮೈತ್ರಿ ಅಭ್ಯರ್ಥಿಗೆ ಬಂದರೆ 28 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ. ರಾಜ್ಯಕ್ಕೆ ಪ್ರಧಾನಿ ಬರುತ್ತಿದ್ದಾರೆ. ಭಾಷಣ ಮಾಡಿಕೊಂಡು ಹೋಗುತ್ತಿದ್ದಾರೆ. ನಮ್ಮ ಪಕ್ಷವನ್ನು ಸ್ಥಳೀಯ ಬಿಜೆಪಿ ನಾಯಕರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಕಿಡಿಗಾರಿದರು.

ಪ್ರಧಾನಿ ಸಭೆಗಳಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಕರೆಯಬೇಕಲ್ಲವೇ? ಕಲಬುರಗಿ ಸಭೆಗೂ ಜೆಡಿಎಸ್‌ ಸ್ಥಳೀಯ ಮುಖಂಡರನ್ನು ಕರೆದಿಲ್ಲ, ಅವರೇ ಮಾಡಿಕೊಂಡಿದ್ದಾರೆ. ಹೈದ್ರಾಬಾದ್ ಕರ್ನಾಟಕ ಭಾಗದ ಜೆಡಿಎಸ್‌ ಶಾಸಕರು, ಮಾಜಿ ಶಾಸಕರಿಗೆ ಮಾಹಿತಿ ಕೊಟ್ಟಿಲ್ಲ. ಶಿವಮೊಗ್ಗ ಸಭೆಗೂ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಕರೆಯಬಹುದಿತ್ತು. ಶಿವಮೊಗ್ಗ ಸಭೆಗೂ ನಮ್ಮ ನಾಯಕರನ್ನು ಕರೆದಿಲ್ಲ ಎಂದು ಮುಖಂಡರು ಸಿಟ್ಟು ತೋಡಿಕೊಂಡರು.

ನಮ್ಮ ಪಕ್ಷವನ್ನು ಒತ್ತೆ ಇಟ್ಟು ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ನಮಗೆ ಮೋದಿ ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ, ಬಿಜೆಪಿಯಿಂದ ಇಂಥ ನಡವಳಿಕೆ ನಿರೀಕ್ಷೆ ಮಾಡಿರಲಿಲ್ಲ. ಕೋಲಾರ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಬಿಜೆಪಿ ಮೀನಾಮೇಷ ಎಣಿಸುತ್ತಿದೆ. ಕೇವಲ ಎರಡು ಸೀಟಿಗಾಗಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬೇಕಿತ್ತಾ? ಇವತ್ತೇ ಕೋಲಾರ ಅಭ್ಯರ್ಥಿಯನ್ನು ಘೋಷಣೆ ಮಾಡಿ. ಇಂಥ ಅನಿಶ್ಚಿತತೆಯಿಂದ ಪಕ್ಷಕ್ಕೆ ನಷ್ಟ ಆಗುತ್ತದೆ ಎಂದು ಮುಖಂಡರು ತಮ್ಮ ಕಳವಳ ವ್ಯಕ್ತಪಡಿಸಿದರು.


Share News

Comments are closed.

Exit mobile version