Friday, November 22
Share News

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕರಾದ ಸುಕುಮಾರ್ ಶೆಟ್ಟಿ, ಎಂಪಿ ಕುಮಾರಸ್ವಾಮಿ ಹಾಗೂ ಅವರ ಬೆಂಬಲಿಗರು ಮಂಗಳವಾರ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾದರು. 2017ರಲ್ಲಿ ಬಿಜೆಪಿಯ ಜತೆ ಕೈಜೋಡಿಸಿದ್ದ ಜಯಪ್ರಕಾಶ್‌ ಹೆಗ್ಡೆ ಅವರು ಇದೀಗ ಘರ್‌ ವಾಪ್ಸಿಯಾಗಿದ್ದಾರೆ. ಇನ್ನು ವಿಧಾನಸಭೆ ಚುನಾವಣೆ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಬೈಂದೂರು ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಹಾಗೂ ಬಿಜೆಪಿಯಿ ತೊರೆದು ಜೆಡಿಎಸ್‌ ಸೇರಿದ್ದ ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಕೂಡ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಮೂವರು ನಾಯಕರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಗೃಹ ಸಚಿವ ಡಾ.ಜಿ‌. ಪರಮೇಶ್ವರ್, ಶಿಕ್ಷಣ ಸಚಿವ ಮಧುಬಂಗಾರಪ್ಪ, ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷ್ಮಿ ಹೆಬ್ಬಾಳ್ಕರ್, ಚಿಕ್ಕಮಗಳೂರು ಉಸ್ತುವಾರಿ ಕೆಜೆ ಜಾರ್ಜ್, ಶಾಸಕ ರಾಜೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಚಂದ್ರಪ್ಪ, ಶಾಸಕ ಎಚ್. ಡಿ ತಮ್ಮಯ್ಯ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಎಂಎಲ್‌ಸಿ ಯುಬಿ ವೆಂಕಟೇಶ್, ಬಿ.ಎಲ್. ಶಂಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ ಉಪಸ್ಥಿತರಿದ್ದರು.

ಆರಂಭದಲ್ಲಿ ಪಕ್ಷೇತರರಾಗಿ, ನಂತರ ಜನತಾದಳದಲ್ಲಿ ಗುರುತಿಸಿಕೊಂಡು ಮುಂದೆ ಕಾಂಗ್ರೆಸ್‌ ಸೇರಿ, 2017ರಲ್ಲಿ ಬಿಜೆಪಿಯ ಜತೆ ಕೈಜೋಡಿಸಿದ್ದ ಜಯಪ್ರಕಾಶ್‌ ಹೆಗ್ಡೆ ಇದೀಗ ಘರ್‌ ವಾಪ್ಸಿಯಾಗಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ. ಕರಾವಳಿ ಅಭಿವೃದ್ಧಿಯ ಗುರಿ ಸಾಧನೆಗೆ ಕಾಂಗ್ರೆಸ್ ಸೇರುತ್ತಿರುವುದಾಗಿ ಜಯಪ್ರಕಾಶ್‌ ಹೆಗ್ಡೆ ಹೇಳಿದ್ದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಾತಿಗಣತಿ ವರದಿಯನ್ನು ಸಲ್ಲಿಸಿರುವ ಜಯಪ್ರಕಾಶ್‌ ಹೆಗ್ಡೆ ಅವರನ್ನು ಮರಳಿ ಕಾಂಗ್ರೆಸ್‌ ತೆಕ್ಕೆಗೆ ಸೆಳೆಯಲು ಹಿಂದಿನಿಂದಲೇ ಭಾರಿ ಪ್ರಯತ್ನಗಳು ನಡೆಯುತ್ತಿದ್ದವು. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಈಗ ಚುನಾವಣಾ ಟಿಕೆಟ್‌ ನೀಡಬೇಕಾಗಿರುವುದರಿಂದ ಪಕ್ಷ ಸೇರಲಿದ್ದಾರೆ. ಆದರೆ, ಅವರಿಗೆ ಟಿಕೆಟ್‌ ನೀಡಬಾರದು, ಆಗಾಗ ಪಕ್ಷ ಬದಲಿಸುವ ಹೆಗ್ಡೆಯವರಿಗಿಂತ ಪಕ್ಷ ನಿಷ್ಠೆಯಿಂದ ದುಡಿಯುವ ಸುಧೀರ್‌ ಕುಮಾರ್‌ ಮುರೊಳ್ಳಿ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಆಗ್ರಹ ಕ್ಷೇತ್ರದಲ್ಲಿ ಜೋರಾಗಿದೆ. ಹೀಗಾಗಿಯೇ ಗೋಬ್ಯಾಕ್‌ ಹೆಗ್ಡೆ ಅಭಿಯಾನವನ್ನು ಬಹಿರಂಗವಾಗಿಯೇ ನಡೆಸಲಾಗುತ್ತಿದೆ.


Share News

Comments are closed.

Exit mobile version